ಧಾರವಾಹಿ ಪ್ರೇರಣೆ ಪಡೆದು ಗಂಡನ ಕೊಲೆಗೆ ಸಂಚು ರೂಪಿಸಿದ ಪತ್ನಿ..
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಧಾರಾವಾಹಿಯಿಂದ ಪ್ರೇರಣೆ ಪಡೆದು ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ ಮಾಡಿರುವ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ.
ಹತ್ಯೆಯಾದ ದುರ್ದೈವಿ ಪತ್ನಿ ಶಶಿಕುಮಾರ್. ಅವರ ಪತ್ನಿ ನಾಗಮಣಿ (28), ಆಕೆಯ ಪ್ರಿಯಕರ ಹೇಮಂತ್ (25) ಕೊಲೆ ಮಾಡಿದ ಆರೋಪಿಗಳು. ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆತುರುಕಿ ಶಶಿಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ.
ಕನಕಪುರದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನಾಗಮಣಿಗೆ ಹೇಮಂತ್ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ನಂತರದಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದು ನಿರಂತರವಾಗಿ ಮುಂದುವರೆಸಿಕೊಂಡಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಪತ್ನಿ ಪೋನ್ನಲ್ಲಿ ಹೆಚ್ಚಾಗಿ ಮಾತನಾಡುತ್ತಿರುವುದನ್ನು ಅರಿತ ಶಶಿಕುಮಾರ್ ಆಕೆಯೊಂದಿಗೆ ಜಗಳವಾಡಿದ್ದನಲ್ಲದೆ ಮೊಬೈಲ್ ಕಸಿದುಕೊಂಡು ಕೆಲಸ ಬಿಡಿಸಿದ್ದ. ಪ್ರಿಯಕರನೊಂದಿಗೆ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನನ್ನು ಮುಗಿಸಬೇಕೆಂದು ಹೊಂಚು ಹಾಕಿದ ನಾಗಮಣಿ, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಧಾರಾವಾಹಿಯಿಂದ ಪ್ರೇರಣೆ ಪಡೆದು ಗಂಡನ ಕೊಲೆಗೆ ಸಂಚು ರೂಪಿಸಿದ್ದಾಳೆ.
ಮೃತನ ತಾಯಿ ತಾಯಮ್ಮ ತನ್ನ ಸೊಸೆಯೇ ಹತ್ಯೆ ಮಾಡಿದ್ದಾರೆಂದು ಶಂಕಿಸಿ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಗಮಣಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ನಾಗಮಣಿ ಮತ್ತು ಆಕೆಯ ಪ್ರಿಯಕರ ಹೇಮಂತ್ ಇಬ್ಬರೂ ಸೇರಿ ಶಶಿಕುಮಾರ್ನನ್ನು ಕೊಲೆ ಮಾಡಿರುವ ನಿಜಾಂಶ ಬೆಳಕಿಗೆ ಬಂದಿದೆ.