ಲೋಕಸಭೆ ಚುನಾವಣೆಯೊಂದಿಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ಏಕಕಾಲದಲ್ಲಿ ನಡೆಯಲಿದ್ದು, ಆಂಧ್ರದಲ್ಲಿ ವೈಎಸ್ ಆರ್ ಓಟಕ್ಕೆ ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ಬ್ರೇಕ್ ಹಾಕುವರೇ ಎಂಬ ಚರ್ಚೆ ಶುರುವಾಗಿದೆ.
ಲೋಕಸಭೆ ಚುನಾವಣೆಯೊಂದಿಗೆ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಲ್ಲಿಯೇ ಮತದಾನ ನಡೆಯಲಿದ್ದು, ಈ ಪೈಕಿ ಎರಡು ರಾಜ್ಯಗಳಲ್ಲಿ (ಸಿಕ್ಕಿಂ, ಅರುಣಾಚಲ ಪ್ರದೇಶ) ಬಿಜೆಪಿ ಅಧಿಕಾರದಲ್ಲಿದೆ. ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್, ಒಡಿಶಾದಲ್ಲಿ ಬಿಜು ಜನತಾದಳದ ಸರ್ಕಾರವಿದೆ. ಆಂಧ್ರದಲ್ಲಿ ಸದ್ಯ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಾರ್ಟಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು, ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಾರ್ಟಿ ಜೊತೆ ಕೈಜೋಡಿಸಲು ಮುಂದಾಗಿದೆ. ಹೀಗಾಗಿ ವೈಎಸ್ ಆರ್ ಓಟಕ್ಕೆ ಬ್ರೇಕ್ ಬೀಳಬಹುದೇ ಎಂಬ ಚರ್ಚೆ ಶುರುವಾಗಿದೆ.
175 ಸದಸ್ಯ ಬಲ ಹೊಂದಿರುವ ಆಂಧ್ರ ವಿಧಾನಸಭೆಯಲ್ಲಿ ಕಳೆದ ಬಾರಿ ವೈಎಸ್ ಆರ್ ಕಾಂಗ್ರೆಸ್ಸಿನ ಆರ್ಭಟಕ್ಕೆ ತೆಲುಗುದೇಶಂ ಮತ್ತು ಜನಸೇನಾ ಕೊಚ್ಚಿ ಹೋಗಿದ್ದವು.
ಪವನ್ ಕಲ್ಯಾಣ್, ವಿಶಾಖಪಟ್ಟಣಂ ಜಿಲ್ಲೆಯ ಗಾಜುವಾಕ, ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಮೂರನೇ ಸ್ಥಾನಕ್ಕೆ ಇಳಿದು ಹೀನಾಯ ಸೋಲಿಗೆ ಕಾರಣರಾಗಿದ್ದರು. ಆ ಚುನಾವಣೆಯಲ್ಲಿ ವೈಎಸ್ಆರ್ ಪಕ್ಷ 151, ಟಿಡಿಪಿ 23, ಜನಸೇನಾ ಕೇವಲ ಒಂದು ಸ್ಥಾನ ಗೆದ್ದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಅಕೌಂಟ್ ತೆರೆಯಲು ಕೂಡ ವಿಫಲವಾಗಿದ್ದವು. 2018ರಲ್ಲಿ ಬಿಜೆಪಿ ಮೈತ್ರಿಕೂಟದಿಂದ ಹೊರಬಂದಿದ್ದ ತೆಲುಗುದೇಶಂ ಮುಖಂಡ ನಾಯ್ಡು ಈಗ ಮತ್ತೆ ಎನ್ ಡಿಎ ಕೂಟ ಸೇರುವ ಸಾಧ್ಯತೆ ಇದೆ. ಇದು ಬಿಜೆಪಿಗೆ ಲಾಭವಾಗುವ ಸಾಧ್ಯತೆಗೆ ಕಾರಣವಾಗಿದೆ. ಇನ್ನೊಂದೆಡೆ ಸಿಎಂ ಜಗನ್ಮೋಹನ್ ರೆಡ್ಡಿಯವರೂ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಟಿಡಿಪಿ – ಬಿಜೆಪಿ – ಜನಸೇನಾ ಮೈತ್ರಿ ನಡೆಯಬಹುದು ಎನ್ನಲಾಗುತ್ತಿದೆ.
ರೆಡ್ಡಿ, ಕಮ್ಮ, ವೈಶ್ಯ, ಕಾಪು, ರಾಜು, ನಾಯ್ಡು, ಬಲಜಿಗ, ಯಾದವ, ಮುಸ್ಲಿಂ, ದಲಿತ, ಒಬಿಸಿ ಸೇರಿದಂತೆ ಕೆಲವು ಸಮುದಾಯಗಳ ಮತಗಳು ಆಂಧ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ಚುನಾವಣೆಯಲ್ಲಿ ಮತದಾರ ಯಾವುದಕ್ಕೆ ಜೈ ಎನ್ನುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.