ಒಂದು ಕಾಲದಲ್ಲಿ ಇಡೀ ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಕಾಜೋಲ್ ಜೋಡಿ ಈಗ ಮತ್ತೆ ಒಂದಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕರಣ್ ಜೋಹರ್ (Karan Johar) ನಿರ್ದೇಶನದ ಚಿತ್ರದಲ್ಲಿ ಈ ಜೋಡಿಯನ್ನು ಮತ್ತೆ ಒಂದು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಕರಣ್ ಜೋಹರ್ 2023ರಲ್ಲಿ ನಿರ್ದೇಶನ ಮಾಡಿದ್ದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರ ಭಾರೀ ಯಶಸ್ವಿ ಕಂಡಿತ್ತು. ಈಗ ಮತ್ತೆ ನಿರ್ದೇಶನಕ್ಕೆ ಕೈ ಹಾಕುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ನಟಿಸಲಿ ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.
ಕರಣ್ ಜೋಹರ್ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಅಪ್ಡೇಟ್ ನೀಡಿದ್ದಾರೆ. ಅಲ್ಲದೇ, ಸಿನಿಮಾದ ಸ್ಕ್ರಿಪ್ಟ್ ಬುಕ್ ಹಿಡಿದು ಪೋಸ್ ಕೊಟ್ಟಿದ್ದಾರೆ. ಅದರ ಮೇಲೆ ಕರಣ್ ಜೋಹರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಬಗ್ಗೆಯಷ್ಟೇ ಮಾಹಿತಿ ಇದೆ. ಆದರೆ, ಯಾವ ಚಿತ್ರ ಕೈಗೆತ್ತಿಕೊಂಡಿದ್ದಾರೆ ಎಂಬ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ.
1998ರಲ್ಲಿ ಕರಣ್ ಜೋಹರ್ ನಿರ್ದೇಶಕರಾಗಿ ಸಿನಿ ಲೋಕಕ್ಕೆ ಕಾಲಿಟ್ಟಿದ್ದರು. ‘ಕುಚ್ ಕುಚ್ ಹೋತಾ ಹೈ’ ಅವರ ನಿರ್ದೇಶನದ ಮೊದಲ ಸಿನಿಮಾ. ಶಾರುಖ್ ಹಾಗೂ ಕಾಜೋಲ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ರಾಷ್ಟ್ರ ಪ್ರಶಸ್ತಿ ಹಾಗೂ 8 ಫಿಲ್ಮ್ಫೇರ್ ಅವಾರ್ಡ್ ಗಳನ್ನು ಈ ಚಿತ್ರ ಗೆದ್ದಿತ್ತು. ಈಗ ಮತ್ತೆ ಕರಣ್ ಭಾರೀ ಸದ್ದಿನಲ್ಲಿ ನಿರ್ದೇಶನಕ್ಕೆ ಮುಂದಾಗಿದ್ದು, ಹಳೆಯ ಜೋಡಿಯನ್ನು ಒಂದು ಮಾಡುತ್ತಾರಾ ಕಾಯ್ದು ನೋಡಬೇಕಿದೆ.