ಬೆಂಗಳೂರು: ಮಹಿಳೆ ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಸಂಚಾರಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಅಮಾನತು ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ. ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ಟೇಬಲ್ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್ಸ್ ಟೇಬಲ್ ಬಸಪ್ಪ ಅಮಾನತುಗೊಂಡವರು.
ಪೊಲೀಸರು ಇಸ್ರೋ ಜಂಕ್ಷನ್ ಹತ್ತಿರ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮದ್ಯಪಾನ ಮಾಡಿ ಚಾಲನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯನ್ನು ಬೆದರಿಸಿ 8 ಸಾವಿರ ರೂ. ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಂಚಾರ ಪೊಲೀಸರು ತಮ್ಮ ಮಗಳಿಂದ ಹಣ ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ತಂದೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ದೂರು ನೀಡಿದ್ದರು. ಆನಂತರ ಈ ಕುರಿತು ತನಿಖೆ ನಡೆಸಲಾಗಿತ್ತು. ಸದ್ಯ ಪೊಲೀಸರು ತಪ್ಪಿತಸ್ಥರು ಎಂದು ಸಾಬೀತಾಗಿದ್ದು, ನಾಲ್ವರನ್ನು ಅಮಾನತು ಮಾಡಲಾಗಿದೆ.