ಬೆಂಗಳೂರು: ಪೇಯಿಂಟ್ ಬೆರೆಸುವ ಮಿಕ್ಸರ್ ಗೆ ಮಹಿಳೆಯ ಕೂದಲು ಸಿಲುಕಿದ ಪರಿಣಾಮ ಮಹಿಳೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಗರದ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ ನಡೆದಿದೆ. ಸಾವನ್ನಪ್ಪಿದ ದುರ್ದೈವಿಯನ್ನು ಶ್ವೇತಾ(33) ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಮಹಿಳೆ ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದರು ಎನ್ನಲಾಗಿದ್ದು, ಇವರು ನೆಲಗದರನಹಳ್ಳಿಯಲ್ಲಿನ ಶ್ರೀಪೇಂಟ್ಸ್ ಕಾರ್ಖಾನೆ ಕೆಲಸ ಮಾಡುತ್ತಿದ್ದರು.
ಮಿಕ್ಸ್ ಆಗುತ್ತಿದ್ದ ಬಣ್ಣ ಗಟ್ಟಿಯಾಗುತ್ತಿದ್ದರಿಂದಾಗಿ ಅದನ್ನು ಪರಿಶೀಲಿಸುವುದಕ್ಕಾಗಿ ಮಿಕ್ಸರ್ ಬಳಿ ಬಂದು ಬಗ್ಗಿದ್ದಾರೆ. ಆಗ ಗ್ರೈಂಡರ್ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾ ತಲೆ ಕತ್ತರಿಸಿ ಹೋಗಿದೆ. ಕೂದಲು ಸಿಲುಕಿಕೊಳ್ಳುತ್ತಿದ್ದಂತೆ ಅವರು ಕೂಗಿಕೊಂಡಿದ್ದಾರೆ. ಆದರೆ, ಮಿಕ್ಸರ್ ಶಬ್ದದಲ್ಲಿ ಯಾರಿಗೂ ಕೇಳಿಲ್ಲ. ಇನ್ನುಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.