ಅಂಡರ್-19 ವಿಶ್ವಕಪ್ (Under-19 World Cup 2024) ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದು, ಕಪ್ ಗಾಗಿ ಸೆಣಸಾಟ ನಡೆಸಲಿವೆ.
ಎರಡನೇ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ (Australia vs Pakistan) ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 1 ವಿಕೆಟ್ಗಳಿಂದ ಮಣಿಸಿ ಆಸ್ಟ್ರೇಲಿಯಾ ಫೈನಲ್ ಎಂಟ್ರಿ ಕೊಟ್ಟಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 48.5 ಓವರ್ಗಳಲ್ಲಿ ಕೇವಲ 179 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯದ ತಂಡ 9 ವಿಕೆಟ್ ಕಳೆದುಕೊಂಡು 5 ಎಸೆತ ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು.
ಫೆಬ್ರವರಿ 11 ರ ಭಾನುವಾರದಂದು ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಬಲಿಷ್ಠ ಟೀಂ ಇಂಡಿಯಾವನ್ನು (Australia vs India) ಎದುರಿಸಲಿದೆ. ಈ ವಿಶ್ವಕಪ್ ಟೂರ್ನಿಯಲ್ಲಿ ಬಾರತ ತಂಡವು ಒಂದೂ ಪಂದ್ಯ ಸೋಲದೆ ಫೈನಲ್ ತಲುಪಿದೆ. ಭಾರತ ತಂಡವು ಇಲ್ಲಿಯವರೆಗೆ 6 ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಉದಯ್ ಸಹಾರನ್ ಪಡೆ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ಕೂಡ ಲೀಗ್ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ಪ್ರವೇಶಿಸಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಫೈಟ್ ನಡೆಯಲಿದೆ ಎನ್ನಲಾಗುತ್ತಿದೆ.
19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಭಾರತ ದಾಖಲೆಯ 9ನೇ ಬಾರಿಗೆ ಫೈನಲ್ಗೇರಿದ್ದರೆ, ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎರಡು ಬಾರಿ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದು, ಈ ಎರಡೂ ಪಂದ್ಯಗಳಲ್ಲಿ ಭಾರತ ಗೆದ್ದಿದೆ.