ಆತಂಕಕ್ಕೆ ಕಾರಣವಾಗ್ತಿದೆ ‘ಯಾಸ್’ ಚಂಡಮಾರುತ..!
ತೌಕ್ತೆ ಚಂಡಮಾರುತ ಸೃಷ್ಟಿಸಿದ ಅವಾಂತರಗಳಿಂದ ಹೊರಬರುವ ಮುನ್ನವೇ ಮತ್ತೊಂದು ಚಂಡಮಾರುತ ತನ್ನ ಪ್ರಭಾವ ಬೀರಲು ಆರಂಭಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಯಾಸ್ ಚಂಡಮಾರುತ ನಿರ್ಮಾಣವಾಗಿದೆ. ಇದರ ಪರಿಣಾಮ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೇ, ರಾಜ್ಯದ ಕೆಲವೆಡೆಗಳಲ್ಲಿ ನಿನ್ನೆಯಿಂದ ಮಳೆ ಆರಂಭವಾಗಿದೆ. ಇನ್ನು ಈ ಚಂಡಮಾರುತದ ಪರಿಣಾಮ ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದೆ. ಹವಾಮಾನ ಬದಲಾವಣೆಯಿಂದ ಸಮುದ್ರದ ನೀರು ಬೆಚ್ಚಗಾಗುತ್ತಿರುವುದು ಒತ್ತಡ ಹೆಚ್ಚಲು ಮತ್ತು ಅಂತಹ ಬಿರುಗಾಳಿಯನ್ನು ತೀವ್ರಗೊಳ್ಳಲು ಕಾರಣವಾಗುತ್ತಿದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಅಂಡಮಾನ್ ನಿಕೋಬಾರ್ ದ್ವೀಪಗಳು, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಯಾಸ್ ಭಾರೀ ಅವಾಂತರ ಸೃಷ್ಟಿಸಲಿದೆ ಎನ್ನಲಾಗಿದೆ. ಈಗಾಗಲೇ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಒಟ್ಟು 9 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಒರಿಸ್ಸಾದ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಭಾರೀ ಮಳೆಯಿಂದ ಭೂಕುಸಿತವಾಗುತ್ತಿದ್ದು, 46 ಎನ್ಡಿಆರ್ಎಫ್ ತಂಡಗಳನ್ನು ರಚಿಸಲಾಗಿದೆ. ಬಂಗಾಳದ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ತೌಕ್ತೆ ಚಂಡಮಾರುತಕ್ಕಿಂತ ಯಾಸ್ ಚಂಡಮಾರುತದ ಅಬ್ಬರ ಹೆಚ್ಚಾಗಿರಲಿದ್ದು, ಕೇಂದ್ರ ಸರ್ಕಾರ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಯಾಸ್ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಅಲ್ಲದೇ ಇದು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮುಂದುವರಿಯುತ್ತದೆ ಎನ್ನಲಾಗಿದ್ದು ಮತ್ತಷ್ಟು ತೀವ್ರಗೊಳ್ಳುತ್ತದೆ ಮತ್ತು ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳ ತೀರಗಳ ಬಳಿಯಿರುವ ವಾಯವ್ಯ ಬಂಗಾಳ ಕೊಲ್ಲಿಗೆ ತಲುಪಲಿದೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಮೇಲೆ ಯಾಸ್ ಚಂಡಮಾರುತ ನೇರ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ಭಾರತೀಯ ಸೇನೆ ಕೂಡ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಸಿದ್ಧತೆಗಳನ್ನು ಮಾಡಿಕೊಂಡು ರಕ್ಷಣಾ ಕಾರ್ಯಾಚರಣೆಗೆ ಸರ್ವ ಸನ್ನದ್ಧವಾಗಿದೆ. ಉಂಟಾಗುವ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳ ಭಾಗವಾಗಿ ಭಾರತೀಯ ವಾಯುಪಡೆಯ 11 ವಿಮಾನಗಳು ಮತ್ತು 25 ಹೆಲಿಕಾಪ್ಟರ್‌ಗಳನ್ನು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಸಿದ್ಧವಾಗಿದೆ. ಇನ್ನು, ಒಡಿಶಾದಲ್ಲಿನ ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯ ಕ್ಷಿಪಣಿ ಉಡಾವಣಾ ಕೇಂದ್ರಗಳ ರಕ್ಷಣೆಗೆ ಡಿಆರ್ ಡಿಒ ಸಿದ್ಧತೆ ಮಾಡಿಕೊಂಡಿದೆ. ಚಾಂದಿಪುರ್ ಮತ್ತು ಅಬ್ದುಲ್ ಕಲಾಂ ಐಲೆಂಡ್ ಗಳಲ್ಲಿ ಡಿಆರ್ ಡಿಒದ ಕ್ಷಿಪಣಿ ಉಡಾವಣಾ ಘಟಕಗಳಿಗೆ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಲ್ಲದೆ ಯಾಸ್ ತೀವ್ರತೆಗೆ ಮುಂಜಾಗ್ರತಾ ಕ್ರಮವಾಗಿ ೯೦ ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇನ್ನು, ಕರ್ನಾಟಕದಲ್ಲಿ ಸಹ ಯಾಸ್ ಪ್ರಭಾವ ಬೀರಿದ್ದು ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತೀರ ಪ್ರದೇಶದ ಜನರು ಒಂದು ಚಂಡಮಾರುತ ದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಸೈಕ್ಲೋನ್ ಸೃಷ್ಟಿಯಾಗಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.







