ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಯತ್ನಾಳ Saaksha Tv
ಬೆಂಗಳೂರು: ಬದಲಾವಣೆ ಜಗದ ನಿಯಮ. ಯುಗಾದಿಗೆ ಸರಕಾರದಲ್ಲೂ ಬದಲಾವಣೆ ಆಗಬಹುದು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ವರ್ಷ ಯುಗಾದಿಗೆ ಸರಕಾರದಲ್ಲೂ ಬದಲಾವಣೆ ಆಗಬಹುದು. ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಅವಕಾಶ ನೀಡಬಾರದಿತ್ತು. ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದರೆ ಎಲ್ಲಾ ಹಾರಿ ಹೋಗುತ್ತಿದ್ದರು ಎಂದು ಹೇಳಿದರು.
ವೀಕೆಂಡ್ ಕರ್ಫ್ಯೂ ತೆರವು ಮಾಡಿದ್ದಕ್ಕಾಗಿ ಜನರ ಪರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೊರೋನಾ ಕೇವಲ ಶುಕ್ರವಾರ ಸಂಜೆ ಬಂದು ಸೋಮವಾರ ಹೋಗುತ್ತದೆ ಎನ್ನುವ ಗೊಂದಲ ಜನರಲ್ಲಿ ಇತ್ತು. ನೈಟ್ ಕರ್ಫ್ಯೂ ಯಾಕೆ ಅಂದರೆ ಸ್ವಲ್ಪವಾದರು ಏನಾದರು ಇರಬೇಕು. ಏನೋ ಮಾಡಿದ್ದೇವೆ ಎನ್ನುವ ಕಾರಣಕ್ಕೆ ನೈಟ್ ಕರ್ಫ್ಯೂ ಮುಂದುವರಿಕೆ ಮಾಡಿದ್ದಾರೆ ಎಂದು ಸರಕಾರಕ್ಕೆ ವ್ಯಂಗ್ಯವಾಡಿದರು.
ಇನ್ನೂ ಸೂರ್ಯ, ಚಂದ್ರ ಇರುವ ತನಕ ನಿರಾಣಿ ಮುಖ್ಯಂತ್ರಿಯಾಗಲ್ಲಾ. ಬ್ಲೆಜರ್ ಹೊಲಿಸಿ ಇಟ್ಟುಕೊಂಡರೆ ಮಾರಾಟಕ್ಕೆ ಇದೆ ಎಂದು ಎಂಜಿ ರಸ್ತೆಯಲ್ಲಿ ಮಾರಾಟಕ್ಕೆ ಹಾಕಬಹುದು. ಹರಿಹರ ಮತ್ತು ಮೂರನೇ ಪೀಠ ಅದು ನಿರಾಣಿ ಮಠ. ನಮ್ಮ ಮಠ ಪಂಚಮಸಾಲಿ ಸಮುದಾಯದ ಮಠ ಕೂಡಲಸಂಗಮ. ಇನ್ನುಳಿದ ಎರಡು ಮಠ ಅದು ನಿರಾಣಿ ಮಠ ಎಂದು ಟಾಂಗ್ ಕೊಟ್ಟರು.