ರವಿ ಬೆಳಗೆರೆ ನಿಧನಕ್ಕೆ ಸಿಎಂ ಬಿಎಸ್ ವೈ ಕಂಬನಿ
ಬೆಂಗಳೂರು : ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಶ್ರೀ ರಾಮುಲು, ಸುಧಾಕರ್ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ.
ಪತ್ರಕರ್ತರಾಗಿ, ಲೇಖಕರಾಗಿ, ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅವರು, ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು.
ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದವರಿಗೆ, ಅಭಿಮಾನಿಗಳಿಗೆ, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಚಿವ ಸುಧಾಕರ್ ಟ್ವೀಟ್ ಮಾಡಿ, ಖ್ಯಾತ ಲೇಖಕರು, ಹಿರಿಯ ಪತ್ರಕರ್ತರಾದ ರವಿ ಬೆಳೆಗೆರೆ ಅವರ ನಿಧನದಿಂದ ಕನ್ನಡ ಮಾಧ್ಯಮ ಲೋಕ ಬಡವಾಗಿದೆ.
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬೆಳೆಗೆರೆ ಅವರು ತಮ್ಮ ನೇರೆ-ನಿಷ್ಠುರ ಬರವಣಿಗೆಯಿಂದ ಅಪಾರ ಓದುಗ ಬಳಗವನ್ನು ಹೊಂದಿದ್ದರು.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಚಿವ ಶ್ರೀರಾಮುಲು ಟ್ವೀಟ್ ಮಾಡಿ, ನಾಡಿನ ಖ್ಯಾತ ಪತ್ರಕರ್ತ, ಬರಹಗಾರ ಶ್ರೀ ರವಿ ಬೆಳಗೆರೆ ಅವರು ನಿಧನದ ಸುದ್ದಿ ತೀವ್ರ ಆಘಾತಕರ. ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಬರವಣಿಗೆ ಮೂಲಕ ಲಕ್ಷಾಂತರ ಓದುಗರ ಮನಗೆದ್ದಿದ್ದ, ನೂರಾರು ಬರಹಗಾರರಿಗೆ ಸ್ಪೂರ್ತಿಯಾಗಿದ್ದ ರವಿ ಬೆಳಗೆರೆ ಅವರ ನಿಧನ ತುಂಬಲಾರದ ನಷ್ಟ.
ಅವರಿಗೆ ಸದ್ಗತಿ ದೊರೆಯಲಿ, ಅವರ ಕುಟುಂಬವರು ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.