ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಯಸ್ ಬ್ಯಾಂಕ್ ಷೇರು ಮಾರುಕಟ್ಟೆಯಲ್ಲಿ ಬಾರಿ ಕುಸಿತ ಕಂಡಿದೆ. ನಿನ್ನೆಯಷ್ಟೇ ರಿಸರ್ವ್ ಬ್ಯಾಂಕ್ ಯಸ್ ಬ್ಯಾಂಕ್ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡು ಠೇವಣಿದಾರರಿಗೆ ದಿವಸಕ್ಕೆ 50000 ರೂಪಾಯಿಗಳ ವರೆಗೆ ಮಾತ್ರ ಹಿಂಪಡೆಯಬಹುದು ಎಂದು ಆದೇಶ ನೀಡಿತ್ತು.
ಕಳೆದ ವರ್ಷ 275 ರೂ ಇದ್ದ ಶೇರ್ ದರ, ಆರು ತಿಂಗಳ ಹಿಂದೆ 60 ರೂಪಾಯಿಗೆ ಇಳಿದಿತ್ತು. ಬ್ಯಾಂಕ್ ಸರಿಯಾದ ರೀತಿಯಲ್ಲಿ ತನ್ನ ಎನ್ ಪಿ ಎ ಸಾಲಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಗೆ ನೀಡದ ಕಾರಣ ರಿಸರ್ವ್ ಬ್ಯಾಂಕ್ ಅನೇಕ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಇದೀಗ ಬ್ಯಾಂಕ್ ಅನ್ನು ತನ್ನ ಹಿಡಿತಕ್ಕೆ ಪಡೆದು ಇನ್ನಷ್ಟು ಕ್ರಮ ಕೈಗೊಳ್ಳಲು ಮುಂದಾಗಿದೆ.
ನಿನ್ನೆ 7 ರೂಪಾಯಿ ಏರಿಕೆ ಕಂಡ ಯಸ್ ಬ್ಯಾಂಕ್ ದಿನದ ಅಂತ್ಯಕ್ಕೆ 37 ರೂಪಾಯಿ ತಲುಪಿತ್ತು. ಇಂದು 22 ರೂಪಾಯಿ ಇಳಿಕೆ ಕಂಡು 15 ಆಸುಪಾಸಿನಲ್ಲಿ ದಿನದ ವ್ಯವಹಾರ ನಡೆಸುತ್ತಿದೆ. ಇಂದು ಬೆಳಿಗ್ಗೆ 37 ರೂಪಾಯಿಯಿಂದ ಒಮ್ಮೆಲೇ 6 ರೂಪಾಯಿ ಕುಸಿದು ಷೇರು ಮಾರುಕಟ್ಟೆಯಲ್ಲಿ ಭಯದ ವಾತಾವರಣ ನಿರ್ಮಿಸಿತು. ಇದು ದೇಶದ ಮ್ಯೂಚುಯಲ್ ಫಂಡ್ ಇನ್ವೆಸ್ಟ್ಮೆಂಟ್ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.








