ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 132 ಜನರಿಗೆ ಕೊರೊನಾ ಸೋಂಕು
ಬೆಂಗಳೂರು: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಕಾಣಿಸಿಕೊಂಡಿದ್ದು, ಏಕಾಏಕಿ ಬೆಂಗಳೂರಿನಲ್ಲಿ 132ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಕಳೆದ ಕೆಲವು ದಿನಗಳಿಂದ ಇಳಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಈಗ ಏಕಾಏಕಿ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿವೆ. ಅಲ್ಲದೇ BA.2.10 ಹಾಗೂ BA.2.12 ಗಳು ಕಾಣಿಸಿಕೊಂಡಿದ್ದಾಗಿ ಜಯದೇವ ಆಸ್ಪತ್ರೆ ನಿರ್ದೇಶಕ ಸಿ,ಎನ್.ಮಂಜುನಾಥ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ನೂ 3-4 ವಾರದಲ್ಲಿ ಕೊರೊನಾ 4ನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಈ ಬಾರಿಯ ಅಲೆಗೆ BA2 ರೂಪಾಂತರಿ ವೈರಸ್ ಕಾರಣವಾಗಬಹುದು. ಕೊರೊನಾ 3ನೇ ಅಲೆಯಲ್ಲಿ ಸೋಂಕಿತರು ಯಾವೆಲ್ಲ ಲಕ್ಷಣ ಹೊಂದಿದ್ದರೂ, ಅದೇ ಲಕ್ಷಣಗಲು ನಾಲ್ಕನೇ ಅಲೆಯಲ್ಲಿಯೂ ಗೋಚರಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯೂ ಆಸ್ಪತ್ರಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುತ್ತದೆ. ಆದರೆ ಸೋಂಕು ವ್ಯಾಪಕವಾಗಿರುತ್ತದೆ.
ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಶ್ವಾಸಕೋಶ, ಹೃದಯ ಸಮಸ್ಯೆ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಅತ್ಯಂತ ಜಾಗರೂಕರಾಗಿ ಇರಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜ್ವರ, ಕೆಮ್ಮು-ಶೀತವನ್ನು ನಿರ್ಲಕ್ಷಿಸಬೇಡಿ. ಕೂಡಲೇ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಡಾ. ಮಂಜುನಾಥ ತಿಳಿಸಿದ್ದಾರೆ.