ನವದೆಹಲಿ : ಕಳೆದ 15 ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ 100 ಜನರ ಹತ್ಯೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಅಲ್ಲದೆ ಬುಲಂದ್ಶೆಹರ್ ನಲ್ಲಿ ನಡೆದ ಇಬ್ಬರು ಸಾಧುಗಳ ಕೊಲೆ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಈ ಪ್ರಕರಣವನ್ನು ರಾಜಕೀಯಗೊಳಿಸದೆ ಕೊಲೆಗಳ ಹಿಂದಿರುವ ಸತ್ಯವನ್ನು ದೃಢಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ನಲ್ಲಿ “15 ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ 100 ಜನರ ಹತ್ಯೆಯಾಗಿದೆ. ಮೂರು ದಿನಗಳ ಹಿಂದಷ್ಟೇ ಇಟಾದಲ್ಲಿ ಪಚೌರಿ ಕುಟುಂಬದ ಐವರ ಮೃತದೇಹಗಳು ನಿಗೂಢ ರೀತಿಯಲ್ಲಿ ಪತ್ತೆಯಾಗಿತ್ತು. ಅವರಿಗೆ ಏನಾಯಿತು ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.
ಬುಲಂದ್ಶೆಹರ್ ನಲ್ಲಿರುವ ದೇವಾಲಯವೊಂದರ ಬಳಿ ಇಬ್ಬರು ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಗಳನ್ನು ರಾಜಕೀಯಗೊಳಿಸದೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.








