ಮುಂಬೈ: ಕೇವಲ 8 ದಿನಗಳಲ್ಲಿ ಬರೋಬ್ಬರಿ 108 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿನ ನಾಂದೆಡ್ ಸರ್ಕಾರಿ ಆಸ್ಪತ್ರೆಯಲ್ಲಿ (Maharastra Govt Hospital) ನಡೆದಿದೆ. ಈ ಸುದ್ದಿ ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ.
ಸದ್ಯದ ವರದಿಯಂತೆ, 24 ಗಂಟೆಗಳಲ್ಲಿ ನವಜಾತ ಶಿಶು (Infant babies) ಸೇರಿದಂತೆ 11 ಜನ ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಡೀನ್ ಡಾ. ಶಂಕರ್ ರಾವ್ ಚವ್ಹಾಣ್ ಈ ಕುರಿತು ಮಾತನಾಡಿ, ಈ ಸಾವಿಗೆ ಆಸ್ಪತ್ರೆಯಲ್ಲಿನ ಔಷಧಿಯ ಕೊರತೆ ಎಂಬುವುದು ಸುಳ್ಳು ಎಂದು ಹೇಳಿದ್ದಾರೆ. ಆದರೆ, ಇಷ್ಟೊಂದು ಸಂಖ್ಯೆಯಲ್ಲಿ ಪ್ರತಿ ದಿನ ರೋಗಿಗಳು ಸಾವನ್ನಪ್ಪುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 1,100ಕ್ಕೂ ಅಧಿಕ ಜನ ರೋಗಿಗಳನ್ನು ವೈದ್ಯರು ಪರೀಕ್ಷಿಸಿದ್ದಾರೆ. ಈ ಪೈಕಿ 191 ಜನ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಡೀನ್ ಹೇಳಿದ್ದಾರೆ.
24 ಗಂಟೆಗಳಲ್ಲಿ ಸರಾಸರಿ ಸಾವಿನ ಪ್ರಮಾಣ 13 ಆಗಿತ್ತು. ಈ ಹಿಂದೆ ಔಷಧಿ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದರು. ಆದರೆ ಇದೀಗ ಡೀನ್ ಈ ಆರೋಪ ತಳ್ಳಿ ಹಾಕಿದ್ದಾರೆ. ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮೃತಪಟ್ಟಿದ್ದಾರೆ ಎಂದು ಡೀನ್ ಸ್ಪಷ್ಟನೆ ನೀಡಿದ್ದಾರೆ.