“ಅರ್ಧ ಗಂಟೆ ಅವಧಿಯೊಳಗೆ ತಯಾರಾಗುವ ರುಚಿರುಚಿಯಾದ ಬಾಳೆಕಾಯಿ ಶಾವಿಗೆ (ಬಾಕಾಶಾ) ಮಾಡಿ ನೋಡಿ, ಸವಿದು ನೋಡಿ”

1 min read
banana shavige saakshatv food

“ಅರ್ಧ ಗಂಟೆ ಅವಧಿಯೊಳಗೆ ತಯಾರಾಗುವ ರುಚಿರುಚಿಯಾದ ಬಾಳೆಕಾಯಿ
ಶಾವಿಗೆ (ಬಾಕಾಶಾ) ಮಾಡಿ ನೋಡಿ, ಸವಿದು ನೋಡಿ”:

ಕಾಸರಗೋಡು–ದಕ್ಷಿಣ ಕನ್ನಡ ಜಿಲ್ಲೆಗಳ ಸಾಂಪ್ರದಾಯಿಕ ಉಪಾಹಾರ ಇದು. ದಶಕಗಳ ಹಿಂದೆ
ಚಾಲ್ತಿಯಲ್ಲಿತ್ತು. ಆಗಲೂ ವ್ಯಾಪಕವೋ, ಜನಪ್ರಿಯವೋ ಆಗಿದ್ದಂತಿಲ್ಲ. ಇದು ಬಾಳೆಕಾಯಿ ಶಾವಿಗೆ
ಅಲಿಯಾಸ್‌ ಬಾಕಾಶಾ. ಬಾಳೆಕಾಯಿಯಿಂದ ಒತ್ತು ಶ್ಯಾವಿಗೆ. ಬಾಕಾಹು ಹೇಗೋ, ಹಾಗೆಯೇ ಇದೂ
ಹೊಸತಲ್ಲ. ಕಾಸರಗೋಡು, ದಕ ಜಿಲ್ಲೆಗಳ ಹಳೆ ತಲೆಮಾರಿಗಿದು ಗೊತ್ತು. ಇದು ಈ ಭಾಗದ
ಸಾಂಪ್ರದಾಯಿಕ ಮುಂಜಾನೆ ಉಪಾಹಾರದ ತಿಂಡಿ. ಆದರೆ ಈಗ ಮರೆತೇಹೋಗಿದೆ. ಈಗಲೂ ಇದನ್ನು
ಮಾಡಿ ಸವಿಯುವ ಬೆರಳೆಣಿಕೆಯ ಕುಟುಂಬಗಳು ಇದ್ದರೂ ಇರಬಹುದು. ಇದು
ರುಚಿರುಚಿಯಾಗಿರುತ್ತದೆ; ತಯಾರಿಗೆ ಕೇವಲ ಅರ್ಧ ಗಂಟೆ ಸಾಕು. ಯಾವ ಜಾತಿಯ ಬಾಳೆಕಾಯಿಯೂ
ಇದಕ್ಕೆ ಓಕೆ. ಯಾವುದೇ ಕಲಬೆರಕೆ, ರಾಸಾಯನಿಕಗಳಿಲ್ಲದ ಶುದ್ಧ ಆಹಾರ. ನಾವು ಈಗ ಸೇವಿಸುವ
ಅಕ್ಕಿ, ಗೋಧಿಯ ಉಪಾಹಾರಕ್ಕಿಂತ ಪೋಷಕಾಂಶ ದೃಷ್ಟಿಯಿಂದ ಉತ್ತಮ. ಕೃಷಿಕ ಕುಟುಂಬಗಳಿಗಿದು
ಆತ್ಮನಿರ್ಭರ, ಬಹು ಮೆಚ್ಚುಗೆಯ ಆಹಾರ ಆಗಬಲ್ಲುದು. ತುಂಬ ಬಲಿತ ಅಥವಾ ತುಂಬ ಎಳೆಯ
ಕಾಯಿಗಿಂತ ನಡುವಿನದು ಒಳ್ಳೆಯದು. ರೆಸಿಸ್ಟೆಂಟ್ ಸ್ಟಾರ್ಚ್ ಇರುವ ಕರಣ ಸಕ್ಕರೆ
ಕಾಯಿಲೆಯವರಿಗೂ ಅಡ್ಡಿ ಅಲ್ಲ, ಅನುಕೂಲ ಆಗಬಹುದು.

ಯಾವುದೇ ಜಾತಿಯ ಬಾಳೆಕಾಯಿ ಸಿಪ್ಪೆ ಸಮೇತ ಇಡ್ಲಿ ಪಾತ್ರೆ/ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿ. ಬಿಸಿ
ಪೂರ್ತಿ ಆರುವ ಮೊದಲೇ ಸಿಪ್ಪೆ ಬಿಡಿಸಿ ಶಾವಿಗೆ ಮಣೆಯಲ್ಲಿ ಒತ್ತಿ. ಇದರಲ್ಲಿ ಉಪ್ಪು ಇರುವುದಿಲ್ಲ.
ಹಾಗಾಗಿ ಉಪ್ಪು, ಹಸಿಮೆಣಸು, ಈರುಳ್ಳಿ ಮತ್ತು ನಿಮ್ಮ ಇಷ್ಟವಸ್ತುಗಳನ್ನು ಸೇರಿಸಿ ಒಗ್ಗರಣೆ
ಮಾಡಿ.ಶಾವಿಗೆ ಮಣೆ ಇಲ್ಲದಿದ್ದರೆ ಚಕ್ಕುಲಿ ಮುಟ್ಟಿನಲ್ಲೂ ಓಕೆ. ಬಾಳೆಹಣ್ಣು ತಿನ್ನೋದು,
ಬಾಳೆಕಾಯಿಯ ಪಲ್ಯ ಮಾಡೋದು, ಇವು ಬಿಟ್ಟರೆ ಬಾಳೆಕಾಯಿಯನ್ನ ನಮ್ಮ ಮನೆಗಳಲ್ಲಿ
ಇಷ್ಟೊಂದು ಉಪಯೋಗ ಮಾಡಲು ಬರುತ್ತದೆ ಎಂದು ಗೊತ್ತಿರಲೇ ಇಲ್ಲ ಅನ್ನುವುದು ಬಾಕಾಶಾ
ಸೇವಿಸಿರುವ ಬಹುತೇಕರ ಅಭಿಮತ. ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ದಿಢೀರ್ ಬಾಳೆಕಾಯಿ

ಶಾವಿಗೆಯ (ಬಾಕಾಶಾ) ಉಪ್ಕರಿ ದಕ್ಷಿಣ ಕನ್ನಡದಲ್ಲಿ ಈಗ ಮನೆಮಾತು. ಈಗೀಗ ಬಾಳೆ ಬೆಳೆಗಾರರು
ಮಾತ್ರವಲ್ಲ, ಇತರ ಆರೋಗ್ಯಪ್ರಜ್ಞ ನಾಗರಿಕರೂ ಮಾರುಕಟ್ಟೆಯಿಂದ ಒಂದು ಕಿಲೋ ಬಾಳೆಕಾಯಿ
ಖರೀದಿಸಿ ಸುಲಭದಲ್ಲಿ ಬಾಕಾಶಾ ಮಾಡಲು ಮನಸು ಮಾಡುತ್ತಿದ್ದಾರೆ.

"ನಾವು ಮಾಮೂಲಿಯಾಗಿ ಮಾಡುವ ಅಕ್ಕಿ ಶ್ಯಾವಿಗೆಯಂತೆ ಇದನ್ನು ಎರಡು ಸಲ ಬೇಯಿಸಬೇಕಾಗಿಲ್ಲ.
ತಯಾರಿ ಬಲು ಸುಲಭ. ದುರಾದೃಷ್ಟ ಎಂದರೆ ನಮ್ಮ ರೈತರಿಗೆ ಯಾರಿಗೂ ಬಾಕಾಶಾ –
ಬಾಳೆಕಾಯಿಯಿಂದ ಶಾವಿಗೆ ಮಾಡಬಹುದೆಂದೇ ಗೊತ್ತಿಲ್ಲ." ಲಾಕ್ ಡೌನ್ ಕಾಲದಲ್ಲಿ ಬಾಳೆಕಾಯಿಯ
ಬೆಲೆ ಬಿತ್ತಲ್ಲಾ. ಅದರಲ್ಲೂ ಮೈಸೂರು ಜಾತಿಯದಕ್ಕೆ ತೀರಾ ಚಿಲ್ಲರೆ ಬೆಲೆ. ’ತರಬೇಡಿ’ ಅನ್ನೋ
ಸ್ಥಿತಿಗೂ ಬಂದಿತ್ತು. ಲಾಕ್ ಡೌನ್ ಅವಧಿಯಲ್ಲಿ ಬಾಳೆ ಬೆಳೆಗಾರರು ಬಾಳೆಕಾಯಿ ಮಾರಲಾಗದೆ
ಕೋತಿ-ದನಗಳಿಗೆ ತಿನ್ನಿಸಿದ್ದರು. ಹಾಗೆಯೇ ಅಲ್ಲಲ್ಲಿ ಬಿಸಾಕಿ ಕೊಳೆತೂ ಹೋದದ್ದೂ ಇದೆ. ಆಗ
ತಯಾರಾಗಿದ್ದು ಈ ಬಾಕಾಶಾ. ಹೊಸ ವಿದ್ಯೆ ಪಡೆದ ಹೆಣ್ಮಕ್ಕಳಲ್ಲಿ ಭೂರಹಿತರೂ ಚಿಕ್ಕ ಬೆಳೆಗಾರರೂ
ಇದ್ದಾರೆ. ಮರುದಿನದಿಂದಲೇ ಹಲವು ಮನೆಗಳಲ್ಲಿ ಬಾಕಾಹು (ಬಾಳೆಕಾಯಿ ಹುಡಿ/ಹಿಟ್ಟು) ಬಾಕಾಶಾ
(ಬಾಳೆಕಾಯಿ ಶಾವಿಗೆ) ತಯಾರಿಸ ತೊಡಗಿದ್ದಾರೆ. ಇದರ ಬಗ್ಗೆ ಅನೇಕ ಕಾರ್ಯಾಗಾರಗಳು ನಡೆದಿದ್ದು
ಒಂದು ಆಹಾರ ಕ್ರಾಂತಿಯೇ ಸಂಭವಿಸಿದೆ.

ದಶಕದ ಹಿಂದೆ ಬಾಳೆಕಾಯಿ ಶಾವಿಗೆಯನ್ನು ಮತ್ತೆ ಊಟದ ಮೇಜಿಗೆ ತರಲು ಹರಸಾಹಸ ನಡೆಸಿದ
ಸಮುದಾಯ ವಿಜ್ಞಾನ ವಿಶೇಷತಜ್ಞೆ ಕಾಸರಗೋಡು ಕೇವೀಕೆಯ ಡಾ. ಸರಿತಾ ಹೆಗ್ಡೆ. "ಕೇವಿಕೆಯಲ್ಲೇ
ತರಬೇತಿ ಇಟ್ಟುಕೊಂಡರೆ, ಬರುವವರು ಅದೇ ಹಳೆ ಮುಖಗಳು. ಕೆಲವೇ ಮಂದಿಗೆ ಮಾಹಿತಿ ಸಿಗುತ್ತದೆ.
ಬದಲಿಗೆ ನಾವೇ ಊರಿಗೆ ಹೋಗಿ ಮಾಡಿ ತೋರಿಸಿದರೆ ಅದರ ಪರಿಣಾಮ, ಹಬ್ಬುವ ಸಾಧ್ಯತೆ ಹೆಚ್ಚು"
ಎನ್ನುತ್ತಾರೆ ಸರಿತಾ. ಅವರು ಲೆಕ್ಕ ಇಟ್ಟಿಲ್ಲವಾದರೂ, ಕನಿಷ್ಠ 70 ಅಂಗನವಾಡಿಗಳಿಗಾದರೂ ಭೇಟಿ
ಕೊಟ್ಟು ಬಾಳೆಕಾಯಿಯ ಝಟ್ ಪಟ್ ಶಾವಿಗೆಯತ್ತ ಜನಮನ ಸೆಳೆಯಲು ತುಂಬ ಶ್ರಮ ಪಟ್ಟಿದ್ದಾರೆ.
"ನಾವಿಂದು ಮುಂಜಾನೆ ಉಪಹಾರಕ್ಕೆ ಬಳಸುವ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಏನು
ಪೋಷಕಾಂಶಗಳಿವೆ? ಬದಲಿಗೆ, ಬೇಗನೆ ಕರಗುವ, ಕನಿಷ್ಠ ಸಂಸ್ಕರಣೆ ಮಾಡಿ ಗರಿಷ್ಠ ಪೋಷಕಾಂಶ
ಉಳಿಸಿರುವ ಈ ಸಾಂಪ್ರದಾಯಿಕ ಆಹಾರ ತುಂಬ ಶ್ರೇಷ್ಠ ಅಲ್ಲವೇ", ಅವರು ಕೇಳುತ್ತಾರೆ. "ಕದಳಿ
(ಏಲಕ್ಕಿ) ಬಾಳೆ ಶಾವಿಗೆಗೆ ರುಚಿ. ಬೇಯಿಸಿ ಬಿಸಿಯಿದ್ದಾಗಲೇ ಒತ್ತಿ. ಸ್ವಲ್ಪ ಉಪ್ಪುನೀರು ಚಿಮುಕಿಸಿ
ಹಾಗೆಯೇ ತಿನ್ನಿ. ಇಲ್ಲಾಂದ್ರೆ ಒಗ್ಗರಣೆ ಹಾಕಿ ಸವಿಯಿರಿ. ಉಳಿದರೆ ಮೂರು ಬಿಸಿಲಿಗೆ ಒಡ್ಡಿ
ಡಬ್ಬದಲ್ಲಿ ತುಂಬಿ ಇಡಿ. ವರ್ಷವೊಂದಾದರೂ ಕೆಡದು. ಪಾಯಸ, ಚಿತ್ರಾನ್ನ, ಹುರಿದು ಕುರುಕುರು
ಶಾವಿಗೆ – ಏನು ಬೇಕೋ ಅದನ್ನೆಲ್ಲಾ ಮಾಡಿಕೊಳ್ಳಿ" ಎನ್ನುತ್ತಾರೆ ಕಾಸರಗೋಡಿನ 68ರ ಹರೆಯದ
ಸುಶೀಲಕ್ಕ.

banana shavige saakshatv food

"ಬಾಳೆಕಾಯಿಯಲ್ಲಿ ಪೊಟ್ಯಾಸಿಯಂ ಇದೆ, ಕರಗಬಲ್ಲ ನಾರು ಇದೆ, ಕರುಳಿನ ಸೂಕ್ಷ್ಮಜೀವಿಗಳ
ಬೆಳವಣಿಗೆಗೆ ಸಹಕರಿಸುವ ’ಪ್ರಿಬಯೋಟಿಕ್’ ಅಂಶಗಳಿವೆ. ಅದರಲ್ಲಿರುವ ಪಿಷ್ಟ ರೆಸಿಸ್ಟೆಂಟ್

ವರ್ಗದ್ದಾದ ಕಾರಣ ಮಧುಮೇಹಿಗಳಿಗೆ ಪ್ರಯೋಜನಕರ. ಈಗ ಕಾಲ ಬದಲಾಗಿದೆ. ಜನರಲ್ಲಿ
ಆರೋಗ್ಯಪ್ರಜ್ಞೆ, ಅರಿವು ಹೆಚ್ಚಿದೆ. ಬಾಳೆಕಾಯಿಯಲ್ಲಿ ಹಲವು ಔಷಧೀಯ ಗುಣಗಳಿವೆ.
ವಾರಕ್ಕೊಮ್ಮೆಯಾದರೂ ಸುಲಭ ತಯಾರಿಯ ಈ ಆಹಾರಕ್ಕೇಕೆ ನಾವು ಜಾಗ ಕೊಡಬಾರದು?"
ಎನ್ನುವುದು ಅವರ ವಾದ. ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ
ಡಾ. ಟಿ’ಎನ್’ ದೇವರಾಜ್ ಅಭಿಪ್ರಾಯದಂತೆ "ರುಚಿಯಲ್ಲಿ ಫೆಂಟಾಸ್ಟಿಕ್. ಕರಗಲು ಹೆಚ್ಚು ಸಮಯ
ತೆಗೆದುಕೊಳ್ಳುವುದಿಲ್ಲ. ಈ ತಿಂಡಿಯ ಸರಳತೆಯ ಕಾರಣ ಇದು ಜನಪ್ರಿಯ ಆಗಲು ಸಾಧ್ಯ”

"ಒಗ್ಗರಣೆ ಹಾಕಿ ಉಪ್ಕರಿಯಾಗಿ, ಕಾಯಿ ಹಾಲಿನೊಂದಿಗೆ ಮತ್ತು ಫ್ರೈ ಮಾಡಿ ಕುರುಕಲು ತಿಂಡಿಯಾಗಿ –
ಮೂರು ಥರ ಈ ಶ್ಯಾವಿಗೆಯ ರುಚಿ ನೋಡಿದೆವು. ಹೊಸ ಕಚ್ಚಾವಸ್ತು ಅಂತ ರುಚಿಯಲ್ಲಿ ಗೊತ್ತೇ
ಆಗುವುದಿಲ್ಲ. ಹೀಗೊಂದು ಸಾಧ್ಯತೆ ಈ ವರೆಗೆ ಗೊತ್ತೇ ಇರಲಿಲ್ಲ." ಎಂದು ಕೇವಿಕೆಯ ಗೃಹ ವಿಜ್ಞಾನಿ
ಡಾ.ಸುಪ್ರಿಯಾ ಪಾಟೀಲ್ ಹೇಳುತ್ತಾರೆ. ಕೃಷ್ಣಾಪುರ ಗ್ರಾಮದ 10 ಹೆಣ್ಮಕ್ಕಳು 25 ಕಿಲೋ
ಬಾಳೆಕಾಯಿಯನ್ನು ತುಂಡರಿಸಿ ಒಂದು ಮನೆಯ ತಾರಸಿಯ ಮೇಲೆ ಒಣಗಿಸುತ್ತಿದ್ದಾರೆ. ನೆರೆಯೂರಿನ
ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ ಕೆಲವರು ಸ್ವಲ್ಪ ಬಾಕಾಹು ಒಯ್ದದ್ದು ಅಲ್ಲೇ
ಮಾರಾಟವಾಯಿತು. ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಮಾಡಿಕೊಡಿ ಎಂಬ ಆದೇಶವೂ ಸಿಕ್ಕಿದೆಯಂತೆ.
ಬಾಳೆ ಬೆಳೆದು ಮಾರುಕಟ್ಟೆ ಕುಸಿತದಿಂದ ಕಂಗೆಟ್ಟ ಈ ಊರುಗಳಲ್ಲೀಗ ಹೊಸ ಸಂಚಲನ,
ಮುಗುಳುನಗೆ ಮೂಡಿದೆ. ಬಾಕಾಹು – ಬಾಕಾಶಾಗಳು ತಮ್ಮ ನೋವು ಶಮನಗೊಳಿಸಬಲ್ಲ ಮುಲಾಮು
ಎಂದು ಇವರಿಗೆ ಮನದಟ್ಟಾಗಿದೆ. ವರ್ಷದ ಹಿಂದೆ ಎಸೆದ ಅದೇ ಬಾಳೆಕಾಯಿ ಈಗ ಹುಡಿಯಾಗಿ
ಮಾರಾಟ ವಸ್ತುವೂ, ಶಾವಿಗೆಯಾಗಿ ದೈನಂದಿನ ಆಹಾರವೂ ಆಗತೊಡಗಿರುವುದು ಸಣ್ಣ
ಬದಲಾವಣೆಯೇನಲ್ಲ.

"ಬಹಳ ಬೇಗನೆ ಆಗುತ್ತೆ. ತಿನ್ನಲು ತುಂಬಾ ರುಚಿ. ಬಾಳೆಕಾಯಿ ಅಂತ ಅನಿಸೋದೇ ಇಲ್ಲ." ಇದು ಜಿ9
ಬಾಳೆಕಾಯಿಯಿಂದ ಶಾವಿಗೆ (ಬಾಕಾಶಾ) ಮಾಡಿ ಸವಿದ ದಾವಣಗೆರೆಯ ಸರೋಜಾ ಪಾಟೀಲ್
ನಿಟ್ಟೂರು ಅವರ ಉದ್ಗಾರ. ಈಗಾಗಲೇ ಮೂರು-ನಾಲ್ಕು ಬಾರಿ ಬಾಕಾಹು (ಬಾಳೆಕಾಯಿ ಹುಡಿ)
ತಯಾರಿಸಿ ಮೆಚ್ಚಿಕೊಂಡ ಕುಟುಂಬ ಇವರದು. ಮುಂದೆ ಮನೆಮಟ್ಟದಲ್ಲಿ ಸ್ವಲ್ಪ ಹೆಚ್ಚು ತಯಾರಿಸಿ
ಮಾರುಕಟ್ಟೆ ಮಾಡುವ ಪ್ಲಾನ್ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಡ್ರೈಯರಿಗೆ ಆದೇಶ ಕೊಟ್ಟು
ಕಾಯುತ್ತಿದ್ದಾರೆ. "ಈ ನಡುವೆ ಸಿಕ್ಕಿದ ಬಾಕಾಶಾ ವಿದ್ಯೆ ಇನ್ನೊಂದು ಬೋನಸ್. ನಮ್ಮ
ಮನೆಯವರಿಗೂ ಇಷ್ಟ ಆಯಿತು. ಒಣಗಿಸಿ ಇಟ್ಟುಕೊಂಡರೆ ಬೇಕಾದಾಗ ದಿಢೀರ್ ಅಂತ
ಮಾಡಬಹುದಲ್ಲಾ ಅಂತಿದ್ದಾರೆ ನನ್ನ ಸೊಸೆ", ಸರೋಜಾ ಪಾಟೀಲ್ ತಿಳಿಸುತ್ತಾರೆ. "ಮುಂದಿನ
ದಿನಗಳಲ್ಲಿ ಹೆಚ್ಚುಹೆಚ್ಚು ರೈತರೂ ಬಾಕಾಹು ಮತ್ತು ಬಾಕಾಶಾ ಬಗ್ಗೆ ಆಸಕ್ತಿ ತೆಗೆದುಕೊಂಡಾರು,
ತಯಾರಿಸಲೂ ತೊಡಗಿಯಾರು" ಎನ್ನುವುದು ಇವರ ವಿಶ್ವಾಸ.

ಮಾಡುವುದು ಸುಲಭ. ಯಾವುದೇ ಹಿಟ್ಟು ಬೇಕಿಲ್ಲ. ಸಾಂಬಾರ್ ಬಾಳೆಕಾಯಿಯನ್ನು ಕುಕ್ಕರಿನಲ್ಲಿ
ಉಪ್ಪು ಹಾಕಿ ಬೇಯಿಸಿ ಶ್ಯಾವಿಗೆ ಮಣೆ ಅಥವಾ ಚಕ್ಕುಲಿ ಪ್ರೆಸ್‌ನಲ್ಲಿ ಸ್ವಲ್ಪ ಬಿಸಿ ಇರುವಾಗಲೇ ಒತ್ತಿ.
ಆಮೇಲೆ ಚಟ್ನಿಯೊಂದಿಗೆ ಅಥವಾ ಒಗ್ಗರಣೆ ಹಾಕಿ ತಿನ್ನಬಹುದು. ಈರುಳ್ಳಿ, ಟೊಮೆಟೊ ಹಸಿಮೆಣಸಿನ
ಜೊತೆ ಒಗ್ಗರಣೆ ಹಾಕಿ ಅಥವಾ ನಿಮಗೆ ಇಷ್ಟವಾದ ರೀತಿಯಲ್ಲಿ ಮಸಾಲೆ ಹಾಕಿಕೊಳ್ಳಬಹುದು.
ಇನ್ನೊಂದು ಹುರಿದ ಎಳ್ಳು, ಕಾಯಿತುರಿ ಹಾಕಿ ಬೆಲ್ಲದ ಪಾಕಕ್ಕೆ ಹಾಕಿ ಸಿಹಿ ಶಾವಿಗೆ ಮಾಡಿಯೂ
ಸವಿಯಬಹುದು. ಅರ್ಧ ತಾಸಿನಲ್ಲೇ ಪೋಷಕಾಂಶ ಸಮೃದ್ಧ, ಬಾಕಾಶಾ (ಬಾಳೆಕಾಯಿ ಶಾವಿಗೆ)
ತಯಾರಿಸುವ ಪಾಕಶಾಸ್ತ್ರ ಈಗ ಎಲ್ಲೆಡೆ ಬಹು ಜನಪ್ರಿಯ. ಅಕ್ಕಿ- ಗೋಧಿಯ ಶ್ಯಾವಿಗೆಗಿಂತ ಇದು
ತುಂಬ ಆರೋಗ್ಯಕರ. ಸಕ್ಕರೆ ಕಾಯಿಲೆಯವರಿಗೂ ತೊಂದರೆ ಅಲ್ಲ, ಗುಣ ಮಾಡುತ್ತದೆ ಎನ್ನುತ್ತಾರೆ
ಪೋಷಕಾಂಶ ತಜ್ಞರು.

-ಮಾಹಿತಿ ಕೃಪೆ: ಶುದ್ಧಶ್ರೀ, ಶ್ರೀ ಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು ಪುತ್ತೂರು
ಕೃಪೆ – ಹಿಂದವೀ ಸ್ವರಾಜ್ಯ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd