ವಾಷಿಂಗ್ಟನ್: ಅಮೆರಿಕದ (America) ಮೈನೆಯಲ್ಲಿ (Maine) ಗುಂಡಿನ ದಾಳಿ ನಡೆದಿದ್ದು, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿವೆ.
ದಾಳಿ ನಡೆಸಿದ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಮೈನೆಯ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಲೆವಿಸ್ಟನ್ನಲ್ಲಿರುವ (Lewiston) ಬೌಲಿಂಗ್ ಅಲ್ಲೆ (Bowling Alley), ರೆಸ್ಟೋರೆಂಟ್ ಮತ್ತು ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಗುಂಡಿನ ದಾಳಿ ನಡೆದಿದೆ. ಸ್ಥಳಗಳಲ್ಲಿ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಪೊಲೀಸರು ಶಂಕಿತ ಶೂಟರ್ನ (Shooter) ಫೋಟೋಗಳ ಜೊತೆಗೆ ಆತ ಬಳಸಿದ ಕಾರಿನ (Car) ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಉದ್ದನೆಯ ತೋಳಿನ ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾನೆ. ಅಲ್ಲದೇ ಗಡ್ಡ ಬಿಟ್ಟಿದ್ದು, ರೈಫಲ್ ಕೈಯಲ್ಲಿ ಹಿಡಿದಿದ್ದಾನೆ ಎನ್ನಲಾಗಿದೆ.
ಶೂಟರ್ ತಲೆಮರೆಸಿಕೊಂಡಿದ್ದು, ಪೊಲೀಸರು ಅನೇಕ ಸ್ಥಳಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಮೈನೆ ಸ್ಟೇಟ್ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.