ಗುವಾಹಟಿ: ಇಡೀ ದೇಶವೇ ಲೋಕಸಭಾ ಚುನಾವಣೆಯಲ್ಲಿ ಮಿಂದೇಳುತ್ತಿದೆ. ಈ ಮಧ್ಯೆ ಅಸ್ಸಾಂನ ರಂಗಪಾರ ವಿಧಾನಸಭಾ ಕ್ಷೇತ್ರ ಮತ್ತು ಸೋನಿತ್ ಪುರ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕುಟುಂಬ ಎಲ್ಲರ ಗಮನ ಸೆಳೆಯುತ್ತಿದೆ.
ಈ ಒಂದೇ ಕುಟುಂಬದಲ್ಲಿ ಬರೋಬ್ಬರಿ 350 ಜನ ಮತದಾರರಿದ್ದಾರೆ. ಹೀಗಾಗಿ ಈ ಕ್ಷೇತ್ರದ ಎಲ್ಲ ನಾಯಕರು ಈ ಕುಟುಂಬದ ಮನವೊಲಿಕೆಗೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕುಟುಂಬದಲ್ಲಿ 1,200 ಜನ ಸದಸ್ಯರಿದ್ದಾರೆ. ಇದು ದೇಶದ ಅತೀ ದೊಡ್ಡ ಕುಟುಂಬವಾಗಿದೆ. ಈ ಕುಟುಂಬದಲ್ಲಿನ ಎಲ್ಲ ಅರ್ಹ ಸದಸ್ಯರು ಏ.19 ರಂದು ಸೋನಿತ್ಪುರ ಲೋಕಸಭಾ ಕ್ಷೇತ್ರಕ್ಕೆ ಮತ ಚಲಾಯಿಸಲಿದ್ದಾರೆ.
ಈ ಕುಟುಂಬವು ನೇಪಾಳಿ ಪಾಮ್ನ ದಿ.ರಾನ್ ಬಹದ್ದೂರ್ ಥಾಪಾ ಕುಟುಂಬಕ್ಕೆ ಸೇರಿದ್ದಾಗಿದೆ. ಥಾಪಾ ಅವರಿಗೆ ಐವರು ಹೆಂಡತಿಯರು, 12 ಜನ ಗಂಡು, 9 ಜನ ಹೆಣ್ಣು ಮಕ್ಕಳು. ರಾನ್ 150 ಕ್ಕೂ ಅಧಿಕ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಈಗ ಸದ್ಯ ಈ ಕುಟುಂಬದಲ್ಲಿ ಒಟ್ಟು 1,200 ಸದಸ್ಯರಿದ್ದಾರೆ. ಅಲ್ಲದೇ, ಈ ಒಂದೇ ಕುಟುಂಬದಲ್ಲಿ ಬರೋಬ್ಬರಿ 350 ಮತದಾರರಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಈ ಕುಟುಂಬಕ್ಕೆ ಆಗಿಲ್ಲ. ಯಾವುದೇ ಸರ್ಕಾರಿ ಯೋಜನೆಗಳು ಸಿಗುತ್ತಿಲ್ಲ. ಯಾವುದೇ ಸರ್ಕಾರಿ ಕೆಲಸ ಸಿಕ್ಕಿಲ್ಲ. ಹಲವರು ಬೆಂಗಳೂರಿಗೆ ಬಂದು ಕೆಲಸದಲ್ಲಿದ್ದಾರೆ ಎಂದು ಆ ಕುಟುಂಬದಲ್ಲಿನ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.