ಹರಿಯಾಣದಲ್ಲಿ ನಾಲ್ವರು ಶಂಕಿತ ಖಲಿಸ್ಥಾನಿ ಉಗ್ರರ ಸೆರೆ…..
ನಾಲ್ವರು ಶಂಕಿತ ಖಲಿಸ್ಥಾನಿ ಉಗ್ರರನ್ನು ಹರಿಯಾಣ ರಾಜ್ಯದ ಕರ್ನಾಲ್ ನಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕರಿಂದ ಭಾರೀ ಪ್ರಮಾಣದ ಬುಲೆಟ್ಗಳು ಮತ್ತು ಗನ್ಪೌಡರ್ ಕಂಟೈನರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ಥಾನದಿಂದ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತರನ್ನು ಗುರ್ಪ್ರೀತ್, ಅಮನದೀಪ್, ಪರ್ಮಿಂದರ್ ಮತ್ತು ಭೂಪಿಂದರ್ ಎಂದು ಗುರುತಿಸಲಾಗಿದ್ದು ನಾಲ್ವರೂ ಪಂಜಾಬ್ ಮೂಲದವರು ಎನ್ನಲಾಗಿದೆ. ಅವರು ಪಾಕಿಸ್ಥಾನದ ಫಿರೋಜ್ಪುರ್ ಜಿಲ್ಲೆಯ ಖಲಿಸ್ತಾನಿ ಭಯೋತ್ಪಾದಕ ಹರ್ಜಿಂದರ್ ಸಿಂಗ್ ರಿಂದಾ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಮಧುಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಬಂಧಿತ ಶಂಕಿತರು ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಪಂಜಾಬ್ನಿಂದ ಪಡೆದ ಮಾಹಿತಿಯ ಪ್ರಕಾರ, ಹರಿಯಾಣದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.