ಬೆಂಗಳೂರು: ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ 18 ಕಿಲೋಮೀಟರ್ ಸುರಂಗ ರಸ್ತೆಗೆ 43 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವುದನ್ನು ತೀವ್ರವಾಗಿ ವಿರೋಧಿಸಿರುವ ಸಂಸದ ತೇಜಸ್ವಿ ಸೂರ್ಯ, ಇದು ಕೇವಲ 1,800 ಕಾರುಗಳ ಮಾಲೀಕರ ಅನುಕೂಲಕ್ಕಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಯೋಜನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಬೆಂಗಳೂರಿನಲ್ಲಿ ಕಾರು ಇಲ್ಲದಿದ್ದರೆ ಹೆಣ್ಣು ಕೊಡುವುದಿಲ್ಲ’ ಎಂಬ ಹೇಳಿಕೆಯನ್ನು ವ್ಯಂಗ್ಯವಾಗಿ ಉಲ್ಲೇಖಿಸಿ, “ಇದು ರಾಜ್ಯ ಸರ್ಕಾರದ ಸಾಮಾಜಿಕ ಪಿಡುಗು ನಿವಾರಣೆಯ ಯೋಜನೆಯೇ? ಕೆಲವೇ ಕೆಲವು ಕಾರುಗಳ ಮಾಲೀಕರಿಗಾಗಿ ಇಷ್ಟು ಬೃಹತ್ ಮೊತ್ತವನ್ನು ಖರ್ಚು ಮಾಡುವುದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.
ಯಾವುದೇ ಅಧ್ಯಯನವಿಲ್ಲದೆ ಯೋಜನೆ
ಸರ್ಕಾರವು ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಯಾವುದೇ ತಜ್ಞರ ಸಲಹೆ ಪಡೆದಿಲ್ಲ ಮತ್ತು ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ಅಷ್ಟೊಂದು ದೊಡ್ಡ ಮೊತ್ತವನ್ನು ವಿನಿಯೋಗಿಸಿದರೂ ಇದು ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ. ಒಂದು ವೇಳೆ ಸುರಂಗದಲ್ಲಿ ಅಪಘಾತ ಸಂಭವಿಸಿದರೆ ಅದರ ನಿರ್ವಹಣೆ ಹೇಗೆ ಎಂಬ ಬಗ್ಗೆಯೂ ಸರ್ಕಾರ ಯೋಚಿಸಿಲ್ಲ. ಇದು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸರ್ಕಾರದ ಬೇಜವಾಬ್ದಾರಿ ನಡೆಗೆ ಹಿಡಿದ ಕೈಗನ್ನಡಿ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.
ಸಾರ್ವಜನಿಕ ಸಾರಿಗೆಯೇ ಪರಿಹಾರ
ಬೆಂಗಳೂರಿನ ಸಂಚಾರ ದಟ್ಟಣೆಗೆ ಕಾರು ಕೇಂದ್ರಿತ ಯೋಜನೆಗಳ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೇ ಶಾಶ್ವತ ಪರಿಹಾರ ಎಂದು ಪ್ರತಿಪಾದಿಸಿದ ಅವರು, ಐದು ಅಂಶಗಳ ವೈಜ್ಞಾನಿಕ ಪರಿಹಾರಗಳನ್ನು ಮುಂದಿಟ್ಟರು.
“ನಗರದ ಶೇ 70ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಸುವಂತಾಗಬೇಕು. ಅದಕ್ಕಾಗಿ ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸಬೇಕು. ಹಳದಿ ಮೆಟ್ರೊ ಮಾರ್ಗ ಆರಂಭವಾದರೆ ರೇಷ್ಮೆ ಮಂಡಳಿ ಜಂಕ್ಷನ್‌ನಲ್ಲಿ ಶೇ 37ರಷ್ಟು ಹಾಗೂ ನೇರಳೆ ಮಾರ್ಗದಿಂದ ಶೇ 12-14ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಕಾರು ಬಳಸುವವರೂ ಈಗ ಹವಾನಿಯಂತ್ರಿತ ಮೆಟ್ರೊದತ್ತ ಆಕರ್ಷಿತರಾಗುತ್ತಿದ್ದಾರೆ. ಮೆಟ್ರೊ ಜಾಲ ವಿಸ್ತರಣೆ, ಉಪನಗರ ರೈಲು, ಟ್ರ್ಯಾಮ್ ಮತ್ತು ವರ್ತುಲ ರೈಲು ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು” ಎಂದು ಸಲಹೆ ನೀಡಿದರು.
ಸರ್ಕಾರದ ಅಡಿಯಲ್ಲಿ ಮೆಟ್ರೊ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಜೊತೆಗೆ, ಪ್ರಯಾಣ ದರ ಹೆಚ್ಚಳದಿಂದಾಗಿ ಜನರು ಮೆಟ್ರೊ ಬಿಟ್ಟು ಮತ್ತೆ ಸ್ವಂತ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದು ರಸ್ತೆಗಳ ಮೇಲೆ ಮತ್ತಷ್ಟು ಒತ್ತಡವನ್ನು ಸೃಷ್ಟಿಸುತ್ತಿದೆ. ನಗರದಲ್ಲಿ ಸರಿಯಾದ ಫುಟ್‌ಪಾತ್‌ಗಳಿಲ್ಲದೆ ಪಾದಚಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. “ಪುಲ್ವಾಮಾ ದಾಳಿಯಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿ ಪ್ರತಿದಿನ 15-20 ಪಾದಚಾರಿಗಳು ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ” ಎಂದು ಅವರು ದೂರಿದರು.
ಮೆಟ್ರೊ ಯೋಜನೆಗೆ ಅಡ್ಡಗಾಲು
ಸರ್ಜಾಪುರದಿಂದ ಹೆಬ್ಬಾಳದವರೆಗೆ ಮೆಟ್ರೊ ನಿರ್ಮಿಸಲು ಉದ್ದೇಶಿಸಿರುವ ಮಾರ್ಗದಲ್ಲಿಯೇ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಹೊರಟಿದೆ. ಇದೇ ಮಾರ್ಗದಲ್ಲಿ ಮೆಟ್ರೊ ನಿರ್ಮಾಣವಾದರೆ ಗಂಟೆಗೆ 69 ಸಾವಿರ ಜನರು ಪ್ರಯಾಣಿಸಬಹುದು. ಆದರೆ ಸರ್ಕಾರಕ್ಕೆ ಜನಸಾಮಾನ್ಯರ ಓಡಾಟಕ್ಕಿಂತ ಕೆಲವೇ ಕಾರುಗಳ ಸಂಚಾರ ಮುಖ್ಯವಾಗಿದೆ. ಸಮಗ್ರ ಸಂಚಾರ ಯೋಜನೆಯಡಿ ಬೆಂಗಳೂರಿಗೆ 300 ಕಿ.ಮೀ ಮೆಟ್ರೊ ಜಾಲವನ್ನು ಪೂರ್ಣಗೊಳಿಸಬೇಕು. ಆಗ ನಗರದ ಯಾವುದೇ ಮೂಲೆಯಲ್ಲಿದ್ದರೂ 5 ನಿಮಿಷದ ನಡಿಗೆಯಲ್ಲಿ ಮೆಟ್ರೊ ನಿಲ್ದಾಣ ಸಿಗುವಂತಾಗಬೇಕು ಮತ್ತು ಪ್ರತಿ 3 ನಿಮಿಷಕ್ಕೊಂದು ರೈಲು ಸಂಚರಿಸಬೇಕು. ಇದೇ ನಮ್ಮ ಪರ್ಯಾಯ ದೃಷ್ಟಿಕೋನ ಎಂದು ತೇಜಸ್ವಿ ಸೂರ್ಯ ವಿವರಿಸಿದರು.








