ಬೆಂಗಳೂರು: ಡ್ರಗ್ಸ್ ವಿರುದ್ಧ ಪೊಲೀಸರು ಸಮರ ಸಾರಿದ್ದು, ಒಂದೇ ತಿಂಗಳಲ್ಲಿ 49 ಪ್ರಕರಣಗಳು ದಾಖಲಾಗಿವೆ. ಎನ್ ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಸ್ಟಾನ್ಸ್ ಆಕ್ಟ್) ಅಡಿಯಲ್ಲಿ ಬೆಂಗಳೂರಿನಲ್ಲಿ ಇಷ್ಟೊಂದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಒಟ್ಟು 3 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ (Drugs) ಅನ್ನು ಪೊಲೀಸರು (Police) ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 67 ಜನ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಟ್ಟು 171 ಕೆಜಿ 985 ಗ್ರಾಂ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ಎಂಡಿಎಂಎ, 998 ಎಕ್ಸ್ಟೆಸಿ ಮಾತ್ರೆಗಳು ಮತ್ತು 1089 ಎಲ್ಎಸ್ಡಿ ಸ್ಟ್ರಿಪ್ಸ್ಗಳನ್ನು ಪತ್ತೆ ಮಾಡಲಾಗಿದೆ.
ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಸ್ನೇಹಿತರನ್ನು ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯರಪ್ಪನಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದರು. ಆಫ್ರಿಕಾ ಮೂಲದ ಮೈಕಲ್ ಓಕೆಲಿ ಮತ್ತು ಬೆಂಗಳೂರಿನ ಸಹನಾ ಬಂಧಿತರು. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ಕೆ.ಆರ್.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದನು. ಸಹನಾ ಮತ್ತು ಮೈಕಲ್ ಸ್ನೇಹಿತರಾಗಿದ್ದು, ಒಟ್ಟಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ಮೈಕಲ್ ಮತ್ತು ಸಹನಾ ಒಟ್ಟಿಗೆ ಕೆಆರ್ ಪುರಂನಿಂದ ಯರಪ್ಪನಹಳ್ಳಿ ಗ್ರಾಮಕ್ಕೆ ಶಿಫ್ಟ್ ಆಗಿದ್ದರು.








