777ಚಾರ್ಲಿ ಸಿನಿಮಾ ಸ್ಪೂರ್ತಿ – ಪೊಲೀಸ್ ಇಲಾಖೆಯ ಶ್ವಾನಕ್ಕೆ ಚಾರ್ಲಿ ಎಂದು ನಾಮಕರಣ
ಸ್ಯಾಂಡಲ್ ವುಡ್ ಈ ವರ್ಷದ ಬ್ಲಾಕ್ ಬ್ಲಾಸ್ಟರ್ ಚಿತ್ರಗಳ ಸಾಲಿಗೆ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಸೇರಲಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲಾ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಈ ಸಿನಿಮಾ ನೋಡಿದ ನಂತರ ಜನರು ಚಾರ್ಲಿ ಪಾತ್ರ ನಿಭಾಯಿಸಿರುವ ನಾಯಿಗೆ ಫ್ಯಾನ್ಸ್ ಆಗಿಬಿಟ್ಟಿದ್ಧಾರೆ.. ಇದೀಗ ಮಂಗಳೂರಿನ ಪೊಲೀಸ್ ಇಲಾಖೆ ಶ್ವಾನಕ್ಕೆ ‘ಚಾರ್ಲಿ’ ಎಂದು ನಾಮಕರಣ ಮಾಡಲಾಗಿದೆ.
ಮಂಗಳೂರು ಪೊಲೀಸ್ ಇಲಾಖೆಯು ಚಾರ್ಲಿ 777 ಸಿನಿಮಾದಿಂದ ಸ್ಫೂರ್ತಿ ಪಡೆದು ತಮ್ಮ ಶ್ವಾನ ದಳದ ನಾಯಿಮರಿಗೆ ಚಾರ್ಲಿ ಎಂದು ಹೆಸರಿಟ್ಟಿದೆ. ನಾಯಿಮರಿಗೆ ಇನ್ನೂ ಮೂರು ತಿಂಗಳಾಗಿದ್ದು, ಚಾರ್ಲಿ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಕಚೇರಿಯಲ್ಲೇ ಕೇಕ್ ತಂದು, ನಾಯಿಗೆ ಹೆಸರಿಟ್ಟು ಜೂನ್.9ರಂದು ನಾಮಕರಣ ಶಾಸ್ತ್ರ ಮುಗಿಸಿದ್ದಾರೆ. ಈ ನಾಯಿಮರಿಯು ಲ್ಯಾಬ್ರಡರ್ ತಳಿಯಾಗಿದ್ದು, ಬಂಟ್ವಾಳದಿಂದ ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಖರೀದಿಸಲಾಗಿದೆ ಎನ್ನಲಾಗಿದೆ.
ಅಂದಹಾಗೆ ಈ ನಾಯಿ ಮರಿ ಹುಟ್ಟಿದ್ದು 16 ಮಾರ್ಚ್ 2022ರಂದು, ಮೂರ್ನಾಲ್ಕು ತಿಂಗಳ ಬಳಿಕೆ ಈ ನಾಯಿಮರಿ ಬೆಂಗಳೂರಿನಲ್ಲಿ ತರಬೇತಿಗಾಗಿ ಬರಲಿದೆ ಎನ್ನಲಾಗಿದೆ. ಆನಂತರ ಅದನ್ನು ಬಾಂಬ್ ನಿಷ್ಕ್ರೀಯ ಕೆಲಸಕ್ಕೆ ನಿಯೋಜನೆ ಮಾಡಲಾಗುವುದಾಗಿ ಮಾಹಿತಿ ಸಿಕ್ಕಿದೆ.