IND VS PAK : ಪಾಕ್ ವಿರುದ್ಧ ಗೆದ್ದುಬೀಗಿದ ಟೀಂ ಇಂಡಿಯಾ
ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಶುಭಾರಂಭದ ಜೊತೆಗೆ ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಂಡಿದೆ.
ಭಾನುವಾರ ನಡೆದ ಹೈವೋಲ್ಟೇಜ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಸಾಲಿಡ್ ಗೆಲುವು ದಾಖಲಿಸಿದೆ.
ಪಾಕಿಸ್ತಾನ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿ ಗೆಲುವಿನ ನಗೆ ಬೀರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡು ಪಾಕ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ರೋಹಿತ್ ಶರ್ಮಾರ ನಿರ್ಧಾರವನ್ನು ಸಮರ್ಥಿಸುವಂತೆ ಭಾರತೀಯ ಬೌಲರ್ ಗಳು ದಾಳಿ ನಡೆಸಿದರು.
ಪಾಕ್ ನಿಗದಿತ 19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 19.4 ವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಸೇರಿಸಿ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಂ 10 ರನ್, ಫಖರ್ ಜಮಾನ್ ಕೂಡ 10 ರನ್ ಗಳಿಸಿದರು.

42 ಎಸೆತಗಳಲ್ಲಿ 43 ರನ್ ಗಳಿಸಿದ್ದ ರಿಜ್ವಾನ್ ಮತ್ತು 2 ರನ್ ಗಳಿಸಿದ್ದ ಕುಶ್ದಿಲ್ ಶಾ ಹಾರ್ದಿಕ್ ಗೆ ಒಂದೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
ಪಾಕ್ 19.5 ಓವರುಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಭುವನೇಶ್ವರ್ 26 ರನ್ ಗೆ 4 ವಿಕೆಟ್ ಪಡೆದರೆ, ಹಾರ್ದಿಕ್ 3 ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಕಳಪೆಯಾಗಿತ್ತು. ಕೆ.ಎಲ್ ರಾಹುಲ್ ಮೊದಲ ಔವರ್ ನಲ್ಲಿಯೇ ಔಟ್ ಆಗಿ ನಿರಾಸೆ ಮೂಡಿಸಿದರು.
ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.
ಈ ಜೋಡಿ 49 ರನ್ ಗಳ ಜೊತೆಯಾಟವನ್ನು ನೀಡಿತು. ರೋಹಿತ್ ಶರ್ಮಾ ಆಟ 12 ರನ್ ಗಳಿಗೆ ಮುಕ್ತಾಯವಾಯ್ತು.
100ನೇ ಅಂತರಾಷ್ಟ್ರೀಯ ಟಿ 20 ಪಂದ್ಯವನ್ನಾಡಿದ ಕೊಹ್ಲಿ 35 ರನ್ ಗಳಿಸಿ ಔಟ್ ಆದರು. ಸೂರ್ಯಕುಮಾರ್ ಯಾದವ್ 18 ರನ್ ಗಳಿಗೆ ಆಟ ಮುಗಿಸಿದರು.
ಜಡೇಜಾ 35 ರನ್ ಬಾರಿಸಿ ಮೊಹಮ್ಮದ್ ನವಾಜ್ ಗೆ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ ಅಜೇಯ 33 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.








