K S Eshwarappa | ಗ್ರಾಮ ಪಂಚಾಯ್ತಿ ಸದಸ್ಯರ ವೇತನ ಹೆಚ್ಚಳದ ಬಗ್ಗೆ 14ಕ್ಕೆ ಚರ್ಚೆ
ಬೆಂಗಳೂರು : ಇದೇ 14 ರಂದು ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರೊಂದಿಗೆ ಗ್ರಾಮ ಪಂಚಾಯ್ತಿ ಸದಸ್ಯರ ವೇತನ ಹೆಚ್ಚಳ, ಸಾರಿಗೆ, ಮತ್ತಿತರ ಸವಲತ್ತುಗಳನ್ನು ಒದಗಿಸುವ ಬಗ್ಗೆ ಚರ್ಚಿಸಲಾಗುವುದು. ಬಳಿಕ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಮಂಗಳವಾರ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸರ್ಕಾರದ ವತಿಯಿಂದಲೇ, ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಸುವ 25 ವಿಧಾನಪರಿಷತ್ ಸದಸ್ಯರ ನಿಯೋಗವನ್ನು, ಕೇರಳ ಹಾಗೂ ಪಶ್ಚಿಮ ಬಂಗಾಳಕ್ಕೆ ಅಧ್ಯಯನಕ್ಕಾಗಿ ಕಳುಹಿಸಲಾಗುವುದು. ಕೆಳಹಂತದಲ್ಲಿ ಕಾರ್ಯನಿರ್ವಹಿಸುವ ಪಂಚಾಯ್ತಿ ಸದಸ್ಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ , ಸಾಧ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ವೇತನ ಹೆಚ್ಚಳ ಕುರಿತು ಸರ್ಕಾರ ಕಳುಹಿಸಿದ್ದ ಪ್ರಸ್ತಾವವನ್ನು , ಆರ್ಥಿಕ ಇಲಾಖೆ 2021ರಲ್ಲಿ ತಿರಸ್ಕರಿಸಿತ್ತು. ಆ ಹಿನ್ನೆಲೆಯಲ್ಲಿ , ಇಲಾಖೆಯಿಂದಲೇ ಸದಸ್ಯರಿಗೆ ಬಸ್ ಪಾಸ್ , ಟಿಎ,ಡಿಎ, ಸೌಲ ಸೇರಿ ಇತರೆ ಯಾವ ಸೌಲಭ್ಯ ಕಲ್ಪಿಸಬಹುದು ಎಂಬ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು, ಬಳಿಕ ಮುಖ್ಯಮಂತ್ರಿಗಳ ಬಳಿಗೆ ನಿಯೋಗದಲ್ಲಿ ತೆರಳಿ, ವೇತನ ಸೇರಿದಂತೆ ಸಾಧ್ಯವಿರುವ ಎಲ್ಲಾ ಸವಲತ್ತು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ.









