ಸ್ವಾತಂತ್ರ್ಯ ಶತಮಾನದ ಹೊತ್ತಿಗೆ ದೇಶವನ್ನ ಆತ್ಮನಿರ್ಭರ ರಾಷ್ಟ್ರವಾಗಿಸಬೇಕಿದೆ – ನರೇಂದ್ರ ಮೋದಿ
ಸ್ವಾತಂತ್ರ್ಯ ಶತಮಾನದ ಹೊತ್ತಿಗೆ ದೇಶವನ್ನು ಸದೃಢ , ಆತ್ಮವಿಶ್ವಾಸದಿಂದ ಕೂಡಿದ ಆತ್ಮನಿರ್ಭರ ರಾಷ್ಟ್ರವಾಗಿ ರೂಪಿಸುವ ಸಂಕಲ್ಪ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಸರ್ದಾರ್ ಧಾಮ್ ಸಂಘಟನೆ ವತಿಯಿಂದ ಸೂರತ್ ನಲ್ಲಿಂದು ನಡೆದ ಜಾಗತಿಕ ಪಾಟಿದಾರ್ ವ್ಯಾಪಾರ ಶೃಂಗಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಅವರು, ಅಭಿವೃದ್ಧಿಯಲ್ಲಿ ಎಲ್ಲರ ಸಹಭಾಗಿತ್ವ ಮತ್ತು ಪ್ರಯತ್ನ ಇದ್ದಾಗ ಆತ್ಮವಿಶ್ವಾಸ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು. ಭಾರತದಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ. ನಾವು ಅದರ ಸದುಪಯೋಗಕ್ಕೆ ಮನಸ್ಸು ಮಾಡಬೇಕು ಎಂದು ಸ್ವಾತಂತ್ರ್ಯದ ಹೊಸ್ತಿಲಿನಲ್ಲೇ ಸರ್ದಾರ್ ವಲ್ಲಭ ಬಾಯ್ ಪಟೇಲ್ ಹೇಳಿದ್ದ ಮಾತುಗಳನ್ನು ಸ್ಮರಿಸಿದ ಪ್ರಧಾನಿ, ದೇಶದ ಉನ್ನತಿಗೆ ಶ್ರಮಿಸುವಂತೆ ಕರೆ ನೀಡಿದರು.
ಕಳೆದ 8 ವರ್ಷಗಳಲ್ಲಿ ವ್ಯಾಪಾರ, ಉದ್ಯಮ, ಸೃಜನಶೀಲತೆಯಲ್ಲಿ ಹೊಸತನವನ್ನು ಕಾಣುತ್ತಿರುವ ಭಾರತ, ಹೊಸ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಇಂದು ಸಾಮಾನ್ಯ ಕುಟುಂಬದ ಯುವಕರು ಕೂಡ ಸ್ವಯಂ ಉದ್ಯಮಿಯಾಗುವ ಕನಸು ಕಂಡು ಅದನ್ನು ನನಸು ಮಾಡುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ , ನವಭಾರತದ ನವಸಂಸ್ಕೃತಿಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಆಧುನಿಕ ಮೂಲಸೌಕರ್ಯ ಪ್ರಗತಿಗೆ ಅನಿವಾರ್ಯ ಎಂದ ಅವರು, ಅನಗತ್ಯ ಕಾನೂನುಗಳ ಅನುಸರಣೆಯಿಂದ ಮುಕ್ತಿ ನೀಡಲಾಗಿದ್ದು, ನಾವೀನ್ಯತೆಯೊಂದಿಗೆ ದೇಶ, ಮುಂದೆ ಸಾಗಲು ಅನುವು ಮಾಡಿಕೊಟ್ಟಿದೆ ಎಂದು ತಿಳಿಸಿದರು.








