122 ವರ್ಷಗಳಲ್ಲೇ ಅತಿಹೆಚ್ಚು ಬಿಸಿಲು ದಾಖಲಿಸಿದ ವಾಯುವ್ಯ ಮತ್ತು ಮಧ್ಯ ಭಾರತ
ಏಪ್ರಿಲ್ ನಲ್ಲಿ 122 ವರ್ಷಗಳಲ್ಲಿ ಅತ್ಯಂತ ಬಿಸಿಲಿನ ತಾಪಮಾನವನ್ನ ವಾಯುವ್ಯ ಮತ್ತು ಮಧ್ಯ ಭಾರತ ಅನುಭವಿಸಿದೆ. ಸರಾಸರಿ ಗರಿಷ್ಠ ತಾಪಮಾನವು ಕ್ರಮವಾಗಿ 35.9 ಮತ್ತು 37.78 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಹವಾಮಾನ ಕಚೇರಿ ಶನಿವಾರ ತಿಳಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ದೇಶದ ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾಗಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಮೇ ತಿಂಗಳಿನಲ್ಲಿ ಸಾಮಾನ್ಯ ತಾಪಮಾನವು ಮುಂದುವರಿಯುತ್ತದೆ ಎಂದು ಹೇಳಿದರು.
ದಕ್ಷಿಣ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಮೇ ತಿಂಗಳಲ್ಲಿ ರಾತ್ರಿಗಳು ಬೆಚ್ಚಗಿರುತ್ತದೆ ಎಂದು ಮೊಹಾಪಾತ್ರ ಹೇಳಿದರು. ಏಪ್ರಿಲ್ನಲ್ಲಿ ಭಾರತದಲ್ಲಿ ಸರಾಸರಿ ತಾಪಮಾನವು 35.05 ಡಿಗ್ರಿಗಳಾಗಿದ್ದು, ಇದು 122 ವರ್ಷಗಳಲ್ಲಿ ನಾಲ್ಕನೇ ಅತಿ ಹೆಚ್ಚು ತಾಪಮಾನ ಎಂದು ಅವರು ಹೇಳಿದರು.
“ದೇಶದಾದ್ಯಂತ ಮೇ ತಿಂಗಳಲ್ಲಿ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ” ಎಂದು ಮೊಹಾಪಾತ್ರ ಹೇಳಿದರು. ಆದಾಗ್ಯೂ, ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳು ಮತ್ತು ತೀವ್ರ ಆಗ್ನೇಯ ಪರ್ಯಾಯ ದ್ವೀಪವು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಭಾರತ, ವಿಶೇಷವಾಗಿ ದೇಶದ ವಾಯುವ್ಯ ಮತ್ತು ಪಶ್ಚಿಮ ಭಾಗಗಳು, ಕಳೆದ ಕೆಲವು ವಾರಗಳಿಂದ ತೀವ್ರ ಶಾಖದ ಪರಿಸ್ಥಿತಿಗಳನ್ನ ಎದುರಿಸುತ್ತಿವೆ.








