ಕೋರ್ಟ್ ಗಳಲ್ಲಿ ಸ್ಥಳಿಯ ಭಾಷೆಗೆ ಒತ್ತು ನೀಡುವಂತೆ ಕರೆ ನೀಡಿದ ಪ್ರಧಾನಿ ಮೋದಿ
ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಪ್ರೋತ್ಸಾಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದರು, ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಹೊಸದಿಲ್ಲಿಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮೋದಿ ಅವರು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಡಿಜಿಟಲ್ ಇಂಡಿಯಾ ಮಿಷನ್‌ನ ಅತ್ಯಗತ್ಯ ಭಾಗವಾಗಿ ಸರ್ಕಾರ ಪರಿಗಣಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇ-ಕೋರ್ಟ್ಸ್ ಯೋಜನೆಯನ್ನು ದೇಶದಲ್ಲಿ ಮಿಷನ್ ಮೋಡ್‌ನಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ನ್ಯಾಯಾಂಗವು ಸಂವಿಧಾನದ ರಕ್ಷಕ ಮತ್ತು ಶಾಸಕಾಂಗವು ನಾಗರಿಕರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ ಮೋದಿ, ಈ ಸಮತೋಲನವು ದೇಶದಲ್ಲಿ ಪರಿಣಾಮಕಾರಿ ಮತ್ತು ಕಾಲಮಿತಿಯ ನ್ಯಾಯಾಂಗ ವ್ಯವಸ್ಥೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದರು.
75 ವರ್ಷಗಳ ಸ್ವಾತಂತ್ರ್ಯವು ನ್ಯಾಯಾಂಗ ಮತ್ತು ಕಾರ್ಯಾಂಗ ಎರಡರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟಪಡಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದೇಶಕ್ಕೆ ನಿರ್ದೇಶನ ನೀಡಲು ಅಗತ್ಯವಿರುವಲ್ಲೆಲ್ಲಾ ಈ ಸಂಬಂಧ ವಿಕಸನಗೊಂಡಿದೆ ಎಂದು ಅವರು ಹೇಳಿದರು. ಈ ‘ಅಮೃತ ಕಾಲ’ದಲ್ಲಿ ದೇಶದ ದೃಷ್ಟಿ ನ್ಯಾಯ ಸುಲಭವಾಗಿ, ಶೀಘ್ರವಾಗಿ ಮತ್ತು ಎಲ್ಲರಿಗೂ ದೊರೆಯುವ ನ್ಯಾಯಾಂಗ ವ್ಯವಸ್ಥೆಗೆ ಇರಬೇಕು ಎಂದು ಮೋದಿ ಹೇಳಿದರು.
ವಿಚಾರಣಾಧೀನ ಕೈದಿಗಳ ಕುರಿತು ಮಾತನಾಡಿದ ಪ್ರಧಾನಿ, ಇಂದು ದೇಶದಲ್ಲಿ ಸುಮಾರು 3.5 ಲಕ್ಷ ಕೈದಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಬಡ ಅಥವಾ ಸಾಮಾನ್ಯ ಕುಟುಂಬದವರಾಗಿದ್ದು, ಅವರ ಪ್ರಕರಣಗಳಿಗೆ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.








