ಬೆಂಗಳೂರು: ಬೇಸಿಗೆಯ ಆರಂಭಿಕ ದಿನಗಳಲ್ಲಿಯೇ ಬೆಂಗಳೂರಿನಲ್ಲಿ ಬೇಸಿಗೆ ಬೇಗೆ ಮೆಟ್ರೋ ಮಂದಿಯನ್ನು ಕಾಡಲು ಆರಂಭಿಸಿದ್ದು, ತಾಪಮಾನದಲ್ಲಿ ಬೆಂಗಳೂರು ಚೆನ್ನೈ ಹಾಗೂ ಕೋಲ್ಕತಾ ನಗರಗಳನ್ನು ಮೀರಿಸಿದೆ. ಫೆಬ್ರವರಿ 17 ರಂದು ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ತಾಪಮಾನ 31.4 ಡಿಗ್ರಿಯಷ್ಟು ದಾಖಲಾಗಿದೆ. ಸಾಮಾನ್ಯವಾಗಿ ತಾಪಮಾನಕ್ಕೆ ಚೆನ್ನೈ ಹಾಗೂ ಕೋಲ್ಕತಾ ನಗರಗಳು ಹೆಸರುವಾಸಿ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರು ಫೆಬ್ರವರಿ 17ರಂದು ಈ ಎರಡೂ ನಗರಗಳನ್ನು ಮೀರಿಸಿದೆ.
ಉಳಿದಂತೆ ಸೋಮವಾರ ಮಧ್ಯಾಹ್ನ 2.30ರ ವೇಳೆಗೆ ಕಲಬುರಗಿಯಲ್ಲಿ 35 ಡಿಗ್ರಿ, ಬೆಳಗಾವಿ 32.2 ಡಿಗ್ರಿ, ಗದಗ 32.8 ಡಿಗ್ರಿ, ಕಾರವಾರ 34 ಡಿಗ್ರಿ, ಹೊನ್ನಾವರ 31.4, ಚಿತ್ರದುರ್ಗ 31.4 ಹಾಗೂ ಮಂಗಳೂರಿನಲ್ಲಿ 34.2 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. 2005ರ ಫೆ.17ರಂದು ಬೆಂಗಳೂರಿನಲ್ಲಿ 35.9 ಡಿಗ್ರಿ ದಾಖಲಾಗಿತ್ತು. ಪ್ರತೀ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ತಾಪಮಾನ 31.1ರಷ್ಟಿರುತ್ತದೆ.
ಕೇವಲ ಫೆ.17 ಮಾತ್ರವೇ ಅಲ್ಲ, ಫೆ.15ರಂದೂ ಕೂಡ ಬೆಳಗಾವಿಯಲ್ಲಿನ ತಾಪಮಾನಕ್ಕಿಂತಲೂ ಬೆಂಗಳೂರಿನ ತಾಪಮಾನ ಹೆಚ್ಚಾಗಿರುವುದು ದಾಖಲಾಗಿತ್ತು.








