ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ ‘ಯುನೈಟೆಡ್ ಬ್ರೂವರೀಸ್ ಲಿಮಿಟೆಡ್’ (ಯುಬಿಎಲ್), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂಬ ವಿಚಾರ ಹೊಸ ಅಧ್ಯಯನವೊಂದರಿಂದ ಬಹಿರಂಗವಾಗಿದೆ.
ಸ್ವತಂತ್ರ ಸಂಸ್ಥೆ ‘ಸ್ಟಿವಾರ್ಡ್ ರೆಡ್‌ಕ್ವೀನ್’ ಸಿದ್ಧಪಡಿಸಿರುವ “ಕರ್ನಾಟಕ ರಾಜ್ಯ ಸಾಮಾಜಿಕ-ಆರ್ಥಿಕ ಪರಿಣಾಮ ಮೌಲ್ಯಮಾಪನ” (ಎಸ್‌ಇಐಎ) ವರದಿಯನ್ನು ಯುಬಿಎಲ್ ಮಂಗಳವಾರ ಬಿಡುಗಡೆ ಮಾಡಿದೆ. 2024-25ರ ಆರ್ಥಿಕ ವರ್ಷದಲ್ಲಿ ಯುಬಿಎಲ್ ಸಂಸ್ಥೆಯು ತನ್ನ ಸಂಪೂರ್ಣ ಪೂರೈಕೆ ಸರಪಳಿಯ ಮೂಲಕ ಕರ್ನಾಟಕದ ಆರ್ಥಿಕತೆಗೆ ಬರೋಬ್ಬರಿ 4,500 ಕೋಟಿ ರೂ. ಮೌಲ್ಯದ ಕೊಡುಗೆ ನೀಡಿದೆ ಮತ್ತು 36,400 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಈ ವರದಿ ತಿಳಿಸಿದೆ.
ವರದಿಯ ಪ್ರಮುಖ ಅಂಶಗಳು
ಆರ್ಥಿಕತೆಗೆ 4,500 ಕೋಟಿ ರೂ. ಕೊಡುಗೆ: ಯುಬಿಎಲ್ ಸಂಸ್ಥೆಯು ತನ್ನ ಉತ್ಪಾದನೆ, ಕಚ್ಚಾವಸ್ತುಗಳ ಖರೀದಿ, ವಿತರಣೆ, ರಿಟೇಲ್ ವ್ಯಾಪಾರ ಮತ್ತು ಹೋಟೆಲ್/ಪಬ್‌ಗಳ ವಹಿವಾಟು ಎಲ್ಲವೂ ಸೇರಿ ರಾಜ್ಯದ ಆರ್ಥಿಕತೆಗೆ 4,500 ಕೋಟಿ ರೂ. ಮೌಲ್ಯದ ಕೊಡುಗೆ ನೀಡಿದೆ. ಇದು ಕರ್ನಾಟಕದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ. 0.2ರಷ್ಟಾಗಿದೆ.
36,400 ಜನರಿಗೆ ಉದ್ಯೋಗ: ಯುಬಿಎಲ್ ನೇರವಾಗಿ 1,453 ಜನರಿಗೆ ಉದ್ಯೋಗ ನೀಡಿದೆ. ಆದರೆ, ಪರೋಕ್ಷವಾಗಿ (ಸರಬರಾಜುದಾರರು, ವಿತರಕರು, ಮಾರಾಟಗಾರರು) ಸುಮಾರು 34,900 ಉದ್ಯೋಗಗಳನ್ನು ಸೃಷ್ಟಿಸಿದೆ. ಅಂದರೆ, ಯುಬಿಎಲ್‌ನಲ್ಲಿ ಕೆಲಸ ಮಾಡುವ ಒಬ್ಬ ನೇರ ಉದ್ಯೋಗಿಯಿಂದ, ರಾಜ್ಯದಾದ್ಯಂತ 24 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.
ಸ್ಥಳೀಯರಿಗೆ ಆದ್ಯತೆ: ರಾಜ್ಯದ ರೈತರು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುಬಿಎಲ್, 2024-25ರಲ್ಲಿ ಕರ್ನಾಟಕದ ಸ್ಥಳೀಯ ಸರಬರಾಜುದಾರರಿಂದ ಬರೋಬ್ಬರಿ 300 ಕೋಟಿ ರೂ. ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಿದೆ. ಇದರಲ್ಲಿ ಸಕ್ಕರೆ, ಗಾಜಿನ ಬಾಟಲಿಗಳು, ಕಾರ್ಟನ್‌ಗಳು, ಯಂತ್ರೋಪಕರಣಗಳು, ಲೇಬಲ್‌ಗಳು ಮತ್ತು ಸಾರಿಗೆ ಸೇವೆಗಳು ಸೇರಿವೆ.
ಸರ್ಕಾರದ ಬೊಕ್ಕಸಕ್ಕೆ 3,100 ಕೋಟಿ ರೂ. ತೆರಿಗೆ: ಕೇವಲ ವ್ಯಾಪಾರ ಮಾತ್ರವಲ್ಲ, ತೆರಿಗೆಯ ಮೂಲಕವೂ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ಆದಾಯ ತಂದುಕೊಡುತ್ತಿದೆ. 2024-25ರಲ್ಲಿ ಯುಬಿಎಲ್‌ನ ವಹಿವಾಟಿನಿಂದ ರಾಜ್ಯ ಸರ್ಕಾರಕ್ಕೆ ಅಂದಾಜು 3,100 ಕೋಟಿ ರೂ. ತೆರಿಗೆ ಪಾವತಿಯಾಗಿದೆ. ಇದು ರಾಜ್ಯದ ಒಟ್ಟು ತೆರಿಗೆ ಆದಾಯದ ಶೇ. 1.7ರಷ್ಟಿದೆ. ಗ್ರಾಹಕರು ಯುಬಿಎಲ್ ಪಾನೀಯಗಳಿಗೆ ಖರ್ಚು ಮಾಡುವ ಪ್ರತಿ 1 ರೂ.ನಲ್ಲಿ 53 ಪೈಸೆ ಸರ್ಕಾರದ ಬೊಕ್ಕಸಕ್ಕೆ ತೆರಿಗೆಯಾಗಿ ಸೇರುತ್ತದೆ ಎಂದು ವರದಿ ಹೇಳಿದೆ.
21 ಮಿಲಿಯನ್ ಕೇಸ್ ಮಾರಾಟ: 2024-25ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಒಟ್ಟು 21 ಮಿಲಿಯನ್ (2.1 ಕೋಟಿ) ಕೇಸ್ ಯುಬಿಎಲ್ ಪಾನೀಯಗಳು ಮಾರಾಟವಾಗಿವೆ.
‘ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ’
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ವಿವೇಕ್ ಗುಪ್ತಾ, “ಕರ್ನಾಟಕ ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು. ಮಾತ್ರವಲ್ಲ, ನಮ್ಮ ಕಂಪನಿಯ ಪ್ರಧಾನ ಕಚೇರಿ ಇರುವ ಹೆಮ್ಮೆಯ ತಾಣ. ಬೆಂಗಳೂರನ್ನು ‘ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದೇ ಕರೆಯಲಾಗುತ್ತದೆ. ಆಲ್ಕೋಹಾಲ್ ಆಧಾರಿತ ತೆರಿಗೆ ಸೇರಿದಂತೆ ರಾಜ್ಯದ ಪ್ರಗತಿಪರ ನೀತಿಗಳು ನಮಗೆ ಬೆಂಬಲವಾಗಿವೆ. ಈ ವರದಿಯು, ನಾವು ಸ್ಥಳೀಯ ಉದ್ಯೋಗ, ರೈತರು, ವಿತರಕರು ಮತ್ತು ರಾಜ್ಯದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯ ಸ್ಪಷ್ಟ ಚಿತ್ರಣ ನೀಡಿದೆ. ಮುಂದೆಯೂ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಬೆಂಬಲ ಮುಂದುವರಿಯಲಿದೆ,” ಎಂದು ಭರವಸೆ ನೀಡಿದರು.
ಸಮಾಜಮುಖಿ ಕೆಲಸಗಳಲ್ಲೂ ಯುಬಿಎಲ್ ಮುಂದು
ವ್ಯಾಪಾರ, ವಹಿವಾಟು ಮಾತ್ರವಲ್ಲದೆ ‘ಬ್ರೂ ಎ ಬೆಟರ್ ಇಂಡಿಯಾ’ ಅಭಿಯಾನದಡಿ ಯುಬಿಎಲ್ ರಾಜ್ಯದಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಜಲ ಸಂರಕ್ಷಣೆ, ಸಮುದಾಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಜವಾಬ್ದಾರಿಯುತ ಮದ್ಯಪಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಭಾರತದ ಆರ್ಥಿಕತೆಗೆ 43,000 ಕೋಟಿ ರೂ. ಕೊಡುಗೆ
ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತದ ಆರ್ಥಿಕತೆಗೆ ಯುನೈಟೆಡ್ ಬ್ರೂವರೀಸ್ ಭಾರಿ ಕೊಡುಗೆ ನೀಡಿದೆ. 2024-25ರಲ್ಲಿ ಭಾರತದಾದ್ಯಂತ 2.95 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಯುಬಿಎಲ್, ದೇಶದ ಆರ್ಥಿಕತೆಗೆ 43,000 ಕೋಟಿ ರೂ. ಮೌಲ್ಯದ ಕೊಡುಗೆ ನೀಡಿದೆ ಮತ್ತು 30,600 ಕೋಟಿ ರೂ. ತೆರಿಗೆ ಪಾವತಿಸಿದೆ ಎಂಬುದಾಗಿ ಇದೇ ಅಧ್ಯಯನದಿಂದ ತಿಳಿದುಬಂದಿದೆ.
ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ಕಿಂಗ್‌ಫಿಷರ್ ಬ್ರ್ಯಾಂಡ್‌ನ ವಿವಿಧ ಬಿಯರ್‌ಗಳು ಹಾಗೂ ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಸೋಡಾವನ್ನು ಉತ್ಪಾದಿಸುತ್ತದೆ. ಜೊತೆಗೆ ಹೆನಿಕನ್ ಮತ್ತು ಆಮ್‌ಸ್ಟೆಲ್ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಮಾರುಕಟ್ಟೆ ಮಾಡುತ್ತಿದೆ.








