ಶೀಘ್ರದಲ್ಲೇ ದೆಹಲಿಯಿಂದ ಡೆಹ್ರಾಡೂನ್‌ಗೆ ಕೇವಲ 2.5 ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ದೆಹಲಿ ಮತ್ತು ಡೆಹ್ರಾಡೂನ್ ನಡುವೆ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದ್ದು ಎಕ್ಸ್‌ಪ್ರೆಸ್ ಹೆದ್ದಾರಿಯ ನಿರ್ಮಾಣವು ಈ ಎರಡು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಅದನ್ನು ಕೇವಲ 180 ಕಿಲೋಮೀಟರ್‌ಗೆ ಇಳಿಸಲಿದೆ. ಪ್ರಸ್ತುತ, ದೆಹಲಿಯಿಂದ ಡೆಹ್ರಾಡೂನ್‌ಗೆ ಹೋಗುವ ಮಾರ್ಗ ಸುಮಾರು 250 ಕಿಲೋಮೀಟರ್. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಯೋಜನೆಯು ಪ್ರಯಾಣದ ಅವಧಿಯನ್ನು ಕೇವಲ ಎರಡೂವರೆ ಗಂಟೆಗೆ ತಲುಪುವಂತೆ ಮಾಡುವ ಸಾಧ್ಯತೆಯಿದೆ.
ಡೆಹ್ರಾಡೂನ್ -ದೆಹಲಿ ಎಲಿವೇಟೆಡ್ ಎಕ್ಸ್‌ಪ್ರೆಸ್ ಹೆದ್ದಾರಿಯ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಸಿಗಲಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ಹೆದ್ದಾರಿ ಒಂದು ಮೈಲುಗಲ್ಲಾಗಲಿದ್ದು ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ವರದಿ ಹೇಳಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್.ಎಚ್.ಎ.ಐ) ಅಧ್ಯಕ್ಷ ಎಸ್.ಎಸ್. ಸಂಧು ಅವರು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆ ಮಾತುಕತೆ ನಡೆಸಿದ್ದು, ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಕಾರ್ಯಕ್ಕಾಗಿ ಎನ್.ಎಚ್.ಎ.ಐಗೆ ಎಲ್ಲ ಬೆಂಬಲ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯ ಭಾಗವಾಗಿ, ಎತ್ತರದ ರಸ್ತೆ ಮತ್ತು ಡೆಹ್ರಾಡೂನ್ ಹೊರವಲಯ ಬಳಿ ಹೊಸ ಸುರಂಗ ಮಾರ್ಗವಿರುತ್ತದೆ. ಹೆದ್ದಾರಿಯ ಕೆಲವು ಭಾಗಗಳು ಉತ್ತರ ಪ್ರದೇಶದಿಂದ ಹಾದು ಹೋಗಲಿದ್ದು, ಯೋಜನೆಯನ್ನು ತ್ವರಿತಗೊಳಿಸುವ ಸಲುವಾಗಿ ಅರಣ್ಯ ಮತ್ತು ಇತರ ಪರಿಸರ ಅಂಶಗಳನ್ನು ಒಳಗೊಂಡ ಅನುಮತಿಗಾಗಿ ಯುಪಿ ಸರ್ಕಾರದ ಒಪ್ಪಿಗೆ ಕೋರಲು ಎನ್.ಎಚ್.ಎ.ಐ ಅಧ್ಯಕ್ಷರು ಉತ್ತರಖಂಡ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ.
ಇದಲ್ಲದೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅನೇಕ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗಳನ್ನು ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ಕೆಲಸ ಪ್ರಗತಿಯಲ್ಲಿದ್ದು, ಮೂರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ . ಇದು ಎರಡು ನಗರಗಳ ನಡುವಿನ ಅಂತರವನ್ನು 280 ಕಿ.ಮೀ ಕಡಿತಗೊಳಿಸಲಿದ್ದು, ಇದರ ಪರಿಣಾಮವಾಗಿ ಪ್ರಯಾಣಿಕರು ದೆಹಲಿಯಿಂದ ಮುಂಬೈಗೆ 12 ಗಂಟೆಗಳಲ್ಲಿ ತಲುಪಬಹುದಾಗಿದೆ.








