ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷಕ್ಕೆ ಮುಜುಗರ ತರುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದೆ. ಈ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಸಚಿವರ ಉದ್ಧಟತನಕ್ಕೆ ಹೈಕಮಾಂಡ್ ಅಸಮಾಧಾನ
ಕೆಲವು ಸಚಿವರು ಪದೇ ಪದೇ ವಿವಾದಾತ್ಮಕ ಹೇಳಿಕೆಗಳು ಮತ್ತು ವರ್ತನೆಗಳ ಮೂಲಕ ಸರ್ಕಾರಕ್ಕೆ ಮುಜುಗರ ತರುತ್ತಿದ್ದಾರೆ ಎಂದು ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಎಷ್ಟೇ ಬಾರಿ ಸೂಚನೆ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸದೆ, ತಮಗೆ ‘ಗಾಡ್‌ಫಾದರ್’ ಇದ್ದಾರೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೈಕಮಾಂಡ್ ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಹೈಕಮಾಂಡ್ ಮಾತ್ರ ‘ಗಾಡ್‌ಫಾದರ್’, ಉಳಿದಂತೆ ಯಾರೂ ದೊಡ್ಡವರಲ್ಲ ಎಂಬ ಸಂದೇಶವನ್ನು ರವಾನಿಸುವ ಮೂಲಕ ಗುಂಪುಗಾರಿಕೆ ಮತ್ತು ಮನಬಂದಂತೆ ವರ್ತಿಸುವವರಿಗೆ ಕಡಿವಾಣ ಹಾಕಲು ಹೈಕಮಾಂಡ್ ನಿರ್ಧರಿಸಿದೆ.
ಯಾವ ಸಚಿವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ?
ಸಚಿವರಾದ ಕೆ.ಎನ್. ರಾಜಣ್ಣ, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವರು ತಮ್ಮ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುತ್ತಿದ್ದಾರೆ ಎನ್ನಲಾಗಿದೆ. ಇವರ ಹೇಳಿಕೆಗಳು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ಟೀಕಾಸ್ತ್ರ ಒದಗಿಸುತ್ತಿವೆ. ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಚಿವರು ತಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳುತ್ತಿಲ್ಲ. ಹೀಗಾಗಿ, ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಕನಿಷ್ಠ ಪಕ್ಷ ಉತ್ಸಾಹಿ ಯುವಕರಿಗೆ ಅವಕಾಶ ಕಲ್ಪಿಸುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ತಾಕೀತು ಮಾಡಿದೆ.
ಸಿದ್ದರಾಮಯ್ಯರಿಂದ ಸಡ್ಡು: ಹೈಕಮಾಂಡ್ ನಿರ್ಧಾರಕ್ಕೆ ಪ್ರತಿರೋಧ?
ಹೈಕಮಾಂಡ್‌ನ ಈ ಸಂದೇಶವನ್ನು ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರಾದ ಸಚಿವರನ್ನು ಸಂಪುಟದಿಂದ ಕೈಬಿಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸಂಪುಟ ಪುನರ್‌ರಚನೆಯ ಪ್ರಸ್ತಾವನೆ ಇಲ್ಲ, ಅಂತಹ ಯಾವುದೇ ಬೆಳವಣಿಗೆಗೂ ತಾವು ಸಹಮತಿಸುವುದಿಲ್ಲ ಎಂದು ಸಂದೇಶ ರವಾನಿಸುವ ಮೂಲಕ ಸಿದ್ದರಾಮಯ್ಯ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಬಲಾಬಲ ಕುಗ್ಗಿಸಲು ಹೈಕಮಾಂಡ್ ಸಂಚು?
ಇತ್ತೀಚೆಗೆ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿಲುವಿಗೆ ಬದ್ಧ ಎಂದು ಹೇಳುತ್ತಲೇ, ತಮ್ಮದೇ ಆದ ದಾಟಿಯ ರಾಜಕಾರಣಕ್ಕೆ ಮುಂದಾಗಿದ್ದಾರೆ. ತಾವು ಕಾಂಗ್ರೆಸ್ ಮಟ್ಟದಲ್ಲಿ ಅತಿ ದೊಡ್ಡ ನಾಯಕರು ಎಂಬ ನಿಲುವಿನಲ್ಲೇ ವರ್ತಿಸುತ್ತಿದ್ದು, ಇದನ್ನು ಸಹಿಸಿಕೊಳ್ಳಲು ಹೈಕಮಾಂಡ್ ಮುಖಂಡರಿಗೆ ಮುಜುಗರವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿನ ಕೆಲ ಕಾರ್ಯಕ್ರಮಗಳಲ್ಲೂ ಇದೇ ರೀತಿಯ ವರ್ತನೆ ಕಂಡುಬಂದಿದೆ. ನಿಗಮ ಮಂಡಳಿಗಳ ನೇಮಕಾತಿ ಮತ್ತು ವಿಧಾನ ಪರಿಷತ್ತಿನ ಸದಸ್ಯರ ನಿಯೋಜನೆ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಕಮಾಂಡ್ ಹೇಳಿದ್ದಕ್ಕಿಂತಲೂ ವ್ಯತಿರಿಕ್ತವಾದ ನಿಲುವುಗಳನ್ನು ಸಿದ್ದರಾಮಯ್ಯ ಮತ್ತು ಸಚಿವರು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಸಿದ್ದರಾಮಯ್ಯ ಅವರ ಬಲಾಬಲ ಕುಗ್ಗಿಸಲು ಹೈಕಮಾಂಡ್, ಸಂಪುಟ ಪುನರ್‌ರಚನೆಯ ನೆಪದಲ್ಲಿ ಅವರ ಬೆಂಬಲಿಗರನ್ನು ಕೈಬಿಡುವ ಮೂಲಕ ಹಂತಹಂತವಾಗಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಸಂಚು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಚಾರದಲ್ಲಿ ಮತ್ತಷ್ಟು ರಾಜಕೀಯ ಜಟಾಪಟಿ ನಡೆಯುವ ಸಾಧ್ಯತೆ ಇದೆ.








