ಕೋವಿಡ್ ಲಸಿಕೆಗಾಗಿ ಮಾನವನ ಮೇಲೆ ಪ್ರಯೋಗ ಪ್ರಾರಂಭಿಸಿದ ಭಾರತದ ಎರಡು ಕಂಪನಿಗಳು – ಐಸಿಎಂಆರ್
ಹೊಸದಿಲ್ಲಿ, ಜುಲೈ 15: ಜಗತ್ತನ್ನೇ ಕಾಡುತ್ತಿರುವ ಕೋವಿಡ್-19 ವೈರಸ್ ಸೋಂಕಿಗೆ ಲಸಿಕೆಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದರೂ ಇನ್ನೂ ಕೂಡ ಯಾವ ಔಷಧಿಯೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಹಲವು ಲಸಿಕೆಗಳು ಆರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿವೆ. ಇವೆಲ್ಲದರ ನಡುವೆ ಭಾರತದ ಎರಡು ಔಷಧ ತಯಾರಕ ಕಂಪನಿಗಳು ತನ್ನ ಆರಂಭಿಕ ಹಂತದ ಪರೀಕ್ಷೆಯನ್ನು ಯಶಸ್ವಿಗೊಳಿಸಿ ಎರಡನೆಯ ಹಂತವನ್ನು ಆರಂಭಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿಯನ್ನು ನೀಡಿದ್ದು, ಭಾರತೀಯ ಔಷಧ ತಯಾರಕ ಕಂಪನಿಗಳಾದ ಜೈಡಸ್ ಕ್ಯಾಡಿಲಾ ಮತ್ತು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಈಗಾಗಲೇ ದೇಶದ ವಿವಿಧ ಸ್ಥಳಗಳಲ್ಲಿ ಮನುಷ್ಯರ ಮೇಲೆ ಕೊರೊನಾವೈರಸ್ ಔಷಧ ಪ್ರಯೋಗವನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.

ಈ ಎರಡು ಕಂಪನಿಗಳು ಈಗಾಗಲೇ ಇಲಿಗಳು ಮತ್ತು ಇತರ ಜೀವಿಗಳ ಮೇಲೆ ಔಷಧದ ಪರಿಣಾಮ ಮತ್ತು ಇತರ ಅಡ್ಡಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ್ದು, ಇದರ ಸಂಶೋಧನೆಗಳನ್ನು ಭಾರತೀಯ ಔಷಧ ಮಹಾ ನಿಯಂತ್ರಕರ ಕಚೇರಿಗೆ (ಡಿಜಿಸಿಐ) ಗೆ ಸಲ್ಲಿಸಿವೆ.
ಮುಂದಿನ ಹಂತವಾಗಿ ದೇಶದ ವಿವಿಧ ಸ್ಥಳಗಳಲ್ಲಿ ತಲಾ 1,000 ಜನರ ಗುಂಪುಗಳ ಮೇಲೆ ಔಷಧವನ್ನು ಪರೀಕ್ಷಿಸುತ್ತಿವೆ ಎಂದು ಹೇಳಿದ್ದಾರೆ.
ಔಷಧ ಅಭಿವೃದ್ಧಿಪಡಿಸುವ ಹಾದಿಯಲ್ಲಿ ಭಾರತವನ್ನು ವಿಶ್ವದ ಔಷಧಾಲಯ ಎಂದು ವರ್ಣಿಸಿರುವ ಡಾ. ಬಲರಾಮ್ ಭಾರ್ಗವ ಅವರು, ಕೊರೊನಾ ವೈರಸ್ ಗೆ ಶೀಘ್ರವಾಗಿ ಲಸಿಕೆ ಕಂಡು ಹಿಡಿಯುವ ಅನಿವಾರ್ಯತೆ ಉಂಟಾಗಿದೆ ಎಂದರು.

ಜಗತ್ತಿನಾದ್ಯಂತ ಕೊರೊನಾ ವೈರಸ್ ಸುಮಾರು ಅರ್ಧ ಮಿಲಿಯನ್ ಜನರಲ್ಲಿ ಕಾಣಿಸಿಕೊಂಡಿದೆ. ಬಹಳಷ್ಟು ರಾಷ್ಟ್ರಗಳು ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದು, ಆದಷ್ಟು ಬೇಗನೆ ಪರಿಹಾರ ಕಂಡು ಹಿಡಿಯುವುದು ನಮ್ಮೆಲ್ಲರ ನೈತಿಕ ಹೊಣೆಯಾಗಿದೆ ಎಂದರು. ಅಷ್ಟೇ ಅಲ್ಲ ಆಫ್ರಿಕಾ, ಯುರೋಪ್ ಅಥವಾ ಆಗ್ನೇಯ ಏಷ್ಯಾ ದೇಶಗಳಿಗೆ ಸರಬರಾಜು ಮಾಡಲ್ಪಟ್ಟ ಒಟ್ಟಾರೆ ಲಸಿಕೆಗಳ ಪೈಕಿ ಶೇ.60 ರಷ್ಟು ಲಸಿಕೆಗಳು ಭಾರತೀಯ ಮೂಲದ್ದು ಎಂದು ಅವರು ಹೇಳಿದರು.








