ಬೆಂಗಳೂರು: ನಗರದ ಯಲಹಂಕದ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ. ನೆಲೆಸಿರುವ ನಿರಾಶ್ರಿತರ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಗುಡಿಸಲುಗಳು ಮತ್ತು ಅಲ್ಲಿ ವಾಸಿಸುತ್ತಿರುವವರ ಮೂಲದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಬೇಕೆಂದು ಒತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಹಾಗೂ ರೋಹಿಂಗ್ಯಾ ಮುಸ್ಲಿಮರಿಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಧಾರೆ ಎರೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ದಿಢೀರ್ ಸೃಷ್ಟಿಯಾದ ದಾಖಲೆಗಳು
ವಿವಾದಿತ ಸ್ಥಳಕ್ಕೆ ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಭೇಟಿ ನೀಡಿದ ಅಶೋಕ್, ಅಲ್ಲಿನ ವಾಸ್ತವ ಸ್ಥಿತಿಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ವಾಸವಿರುವವರು ಕೇವಲ ಆರು ತಿಂಗಳ ಹಿಂದಷ್ಟೇ ಇಲ್ಲಿಗೆ ಬಂದಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಇವರಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಗಳು ಹೇಗೆ ಸಿಕ್ಕವು? ಎಂದು ಪ್ರಶ್ನಿಸಿದರು. ಈ ದಾಖಲೆಗಳ ಸತ್ಯಾಸತ್ಯತೆ ತಿಳಿಯಲು ಮತ್ತು ಇವರ ಮೂಲವನ್ನು ಪತ್ತೆಹಚ್ಚಲು ಎನ್ಐಎ ತನಿಖೆಯೊಂದೇ ದಾರಿ ಎಂದು ಪ್ರತಿಪಾದಿಸಿದರು.
ಬೆಂಗಳೂರನ್ನು ಮಿನಿ ಬಾಂಗ್ಲಾ ಮಾಡುವ ಹುನ್ನಾರ
ಸರ್ಕಾರದ ನಡೆವಳಿಕೆ ನೋಡಿದರೆ ಬೆಂಗಳೂರಿನ ಕೋಗಿಲು ಲೇಔಟ್ ಅನ್ನು ಮಿನಿ ಬಾಂಗ್ಲಾದೇಶವನ್ನಾಗಿ ಮಾಡಲು ಹೊರಟಂತಿದೆ. ಗೂಗಲ್ ಮ್ಯಾಪ್ ಪರಿಶೀಲಿಸಿದರೆ ಒಂದು ವರ್ಷದ ಹಿಂದೆ ಇಲ್ಲಿ ಖಾಲಿ ಜಾಗವಿತ್ತು. ಈಗ ಏಕಾಏಕಿ ನೂರಾರು ಮನೆಗಳು ತಲೆ ಎತ್ತಿವೆ. ಟ್ಯಾನಿ ರೋಡ್, ಟಿಪ್ಪು ನಗರದ ಕಡೆಯಿಂದ ಜನರನ್ನು ಕರೆತಂದು ಇಲ್ಲಿ ಕೂರಿಸಲಾಗಿದೆ. ವಸೀಂ, ಸರ್ಫರಾಜ್ ಖಾನ್ ಸೇರಿದಂತೆ ಹಲವರು ಈ ಕೃತ್ಯದ ಹಿಂದಿದ್ದಾರೆ. ಸರಿಸುಮಾರು 600 ಕೋಟಿ ರೂಪಾಯಿ ಬೆಲೆಬಾಳುವ ಈ ಜಾಗವನ್ನು ಕನ್ನಡಿಗರಿಗೆ ನೀಡುವ ಬದಲು, ಅಕ್ರಮ ವಲಸಿಗರಿಗೆ ನೀಡಲು ಸರ್ಕಾರ ಮುಂದಾಗಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ಅಶೋಕ್ ಕಿಡಿಕಾರಿದರು.
ಉಡ್ತಾ ಬಾಂಗ್ಲಾ
ಈ ಪ್ರದೇಶದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಬೆಂಗಳೂರು ಕೂಡ ಉಡ್ತಾ ಪಂಜಾಬ್ ಮಾದರಿಯಲ್ಲಿ ಉಡ್ತಾ ಬಾಂಗ್ಲಾ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಪೊಲೀಸರು ಕೂಡ ಅಸಹಾಯಕರಾಗಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಬಗ್ಗೆ ಮಾತನಾಡುತ್ತಾರೆ ಮತ್ತು ರಾಹುಲ್ ಗಾಂಧಿ ಟ್ವೀಟ್ ಮಾಡುತ್ತಾರೆ ಎಂದರೆ ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇರುವ ಶಂಕೆ ಇದೆ. ಇಲ್ಲಿ ಸ್ಲೀಪರ್ ಸೆಲ್ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ಆಸ್ಪದ ನೀಡಿದಂತಾಗುತ್ತದೆ ಎಂದು ಅವರು ಎಚ್ಚರಿಸಿದರು.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ಅಧಿಕಾರಿಗಳು ತರಾತುರಿಯಲ್ಲಿ ವರದಿ ತಯಾರಿಸಿ ಇವರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಬಾರದು. ಸರ್ಕಾರಗಳು ಶಾಶ್ವತವಲ್ಲ, ಇಂದು ಇರುವ ಪಕ್ಷ ನಾಳೆ ಇರುವುದಿಲ್ಲ. ಆದರೆ ಅಧಿಕಾರಿಗಳು ಇರುತ್ತಾರೆ. ನಿಯಮ ಬಾಹಿರವಾಗಿ ನಡೆದುಕೊಂಡರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.
ದಲಿತರ ಹಕ್ಕು ಕಸಿದರೆ ಉಗ್ರ ಹೋರಾಟ: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮೊದಲು ಅಕ್ರಮ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದ ಸರ್ಕಾರ, ಈಗ ಕೇರಳ ಲಾಬಿ ಮತ್ತು ಹೈಕಮಾಂಡ್ ಒತ್ತಡಕ್ಕೆ ಮಣಿದು ಯೂ-ಟರ್ನ್ ಹೊಡೆದಿದೆ. ರಾಜ್ಯದ ಬಡ ದಲಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ನೀಡಬೇಕಾದ ಜಾಗವನ್ನು ಬಾಂಗ್ಲಾದೇಶದವರಿಗೆ ನೀಡಲು ನಾವು ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಇವರಿಗೆ ಮನೆ ನೀಡಿದರೆ, ನಾವು ರಾಜ್ಯದ ಬಡವರನ್ನು ಕರೆತಂದು ಇದೇ ಜಾಗಕ್ಕೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಟ್ಟಾರೆಯಾಗಿ, ಕೋಗಿಲು ಲೇಔಟ್ ವಿಚಾರ ಈಗ ಕೇವಲ ಭೂವಿವಾದವಾಗಿ ಉಳಿಯದೆ, ರಾಷ್ಟ್ರೀಯ ಭದ್ರತೆ ಮತ್ತು ಅಕ್ರಮ ವಲಸಿಗರ ವಿಚಾರವಾಗಿ ಮಾರ್ಪಟ್ಟಿದ್ದು, ಬಿಜೆಪಿ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ರೂಪಿಸಲು ಸಜ್ಜಾಗಿದೆ.







