ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಸ್ಲಿಮ್ ಸಮುದಾಯದ ಮತಗಳನ್ನು ಪಡೆದು ಗೆದ್ದ ಶಾಸಕರು ಇದೀಗ ಅದೇ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಕೋಮುವಾದಿ ವ್ಯಕ್ತಿಯೊಬ್ಬನನ್ನು ವೇದಿಕೆಯಲ್ಲಿ ಕೊಂಡಾಡಿದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕಿತ್ತು ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಮುಹಮ್ಮದ್ ಸ್ವಪಕ್ಷದ ಶಾಸಕಿ ಹಾಗೂ ನಾಯಕರ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಜಿ.ಕೆ.ಪ್ಯಾಲೇಸ್ ಸಭಾಭವನದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೇರಿದ ನಂತರ ಶಾಸಕರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕಿಯ ವಿರುದ್ಧ ಆಕ್ರೋಶ
ಮೂಡಿಗೆರೆ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಸಂಪೂರ್ಣ ಮತಗಳನ್ನು ಪಡೆದು ನಯನಾ ಮೋಟಮ್ಮ ಶಾಸಕಿಯಾಗಿದ್ದಾರೆ. ಆದರೆ, ಗೆದ್ದ ನಂತರ ಅವರು ಕೋಮುವಾದಿಯೊಬ್ಬರು ಭಾಗವಹಿಸಿದ್ದ ಸಭೆಯಲ್ಲಿ ಪಾಲ್ಗೊಂಡು, ಆ ವ್ಯಕ್ತಿಯನ್ನು ಕೊಂಡಾಡಿ ಭಾಷಣ ಮಾಡಿದ್ದಾರೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ಅವಮಾನ. ಈ ಬಗ್ಗೆ ಪ್ರಶ್ನಿಸಲು ಹೋದ ನಮ್ಮ ಮುಖಂಡರನ್ನೇ ಬ್ಲ್ಯಾಕ್‌ಮೇಲ್ ಮಾಡುತ್ತೀರಾ ಎಂದು ದಬಾಯಿಸಿದ್ದಾರೆ. ಮುಖಂಡರ ಕರೆಗೂ ಸ್ಪಂದಿಸುತ್ತಿಲ್ಲ. ಇಂತಹ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೆ.ಮುಹಮ್ಮದ್ ಕಿಡಿಕಾರಿದರು.
ಪಕ್ಷದ ನಾಯಕರ ನಡೆಗೆ ಖಂಡನೆ
ಶಾಸಕಿಯ ಇಂತಹ ನಡೆವಳಿಕೆಯ ಬಗ್ಗೆ ಪಕ್ಷದ ಹಿರಿಯ ನಾಯಕರು ಮೌನ ವಹಿಸಿರುವುದು ಸರಿಯಲ್ಲ. ಇಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಉಚ್ಛಾಟನೆ ಮಾಡಬೇಕಿತ್ತು. ವಿಪರ್ಯಾಸವೆಂದರೆ, ಇಂತಹ ಭಾಷಣ ಮಾಡಿದ ಶಾಸಕಿಯನ್ನು ಬೆಂಬಲಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಪತ್ರ ಬರೆದಿದ್ದಾರೆ. ಅಲ್ಲದೇ ಅಂತಹವರಿಗೆ ಈಗ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಪುರಸ್ಕರಿಸಲಾಗಿದೆ ಎಂದು ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.
ನಿಷ್ಠಾವಂತರಿಗೆ ಅನ್ಯಾಯ
ನಮ್ಮ ಸಮುದಾಯದ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಎಂ.ಎಲ್.ಮೂರ್ತಿ ಅಂತಹ ನಿಷ್ಠಾವಂತ ನಾಯಕರನ್ನು ಪಕ್ಷದಲ್ಲಿ ಕಡೆಗಣಿಸಿ ಮೂಲೆಗುಂಪು ಮಾಡಲಾಗಿದೆ. ಮೂರ್ತಿಯವರಂತಹ ನಾಯಕರ ಬೆಂಬಲಕ್ಕೆ ಇಡೀ ಸಮಾಜ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.
ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ
ಮುಸ್ಲಿಮ್ ಸಮಾಜಕ್ಕೆ ಹಿಂದಿನ ಸರಕಾರ ರದ್ದುಗೊಳಿಸಿದ್ದ ಶೇ.4ರಷ್ಟು ಮೀಸಲಾತಿಯನ್ನು ಮರುಜಾರಿಗೊಳಿಸಲು ಪ್ರಸ್ತುತ ಸರಕಾರ ಇನ್ನು ಮುಂದಾಗಿಲ್ಲ. ಮಂಜೂರಾದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ. ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿಯೂ ಇದೇ ರೀತಿ ಅಸಡ್ಡೆ ತೋರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೆ.ಮುಹಮ್ಮದ್ ಸರಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ಪ್ರಬಲ ನಾಯಕತ್ವದ ಅಗತ್ಯವಿದೆ
ಇದೇ ವೇಳೆ ಮಾತನಾಡಿದ ಮುಖಂಡ ಸಿ.ಎನ್.ಅಕ್ಮಲ್, ಕುರ್‌ಆನ್ ಬಗ್ಗೆ ಅರಿವಿಲ್ಲದವರು ಅದರ ಬಗ್ಗೆ ಮಾತನಾಡುತ್ತಾರೆ. ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದವರು ಶಾಸಕರಾಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಕೇವಲ 60 ಸಾವಿರ ಜನಸಂಖ್ಯೆ ಇರುವ ಜನಾಂಗಕ್ಕೆ 80 ಶಾಸಕರು ಇರುತ್ತಾರೆ. ಆದರೆ, 1 ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಮುದಾಯಕ್ಕೆ ಕೇವಲ 15 ಶಾಸಕರು ಮಾತ್ರ ಇರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಇದು ಎಂತಹ ನ್ಯಾಯ ಎಂದು ಪ್ರಶ್ನಿಸಿದರು.








