ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭಾರಿ ವಿವಾದದ ಬಿರುಗಾಳಿ ಎದ್ದಿದೆ. ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ನಟ ನಿರ್ದೇಶಕ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಇದೀಗ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರರಂಗದ ಬೆನ್ನೆಲುಬಾಗಿರುವ ನಿರ್ಮಾಪಕರ ಬಗ್ಗೆ ಚಂದ್ರಚೂಡ್ ಆಡಿದ ಮಾತುಗಳು ಗಾಂಧಿನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆ ಎಂಬ ಚಂದ್ರಚೂಡ್ ಅವರ ಸ್ಫೋಟಕ ಹೇಳಿಕೆ ಕನ್ನಡ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ವಿವಾದದ ಕಿಡಿ ಹೊತ್ತಿಸಿದ ಆ ಒಂದು ಹೇಳಿಕೆ
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಸ್ಟಾರ್ ನಟರು ಮತ್ತು ನಿರ್ಮಾಪಕರ ನಡುವಿನ ಸಂಬಂಧದ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಚಕ್ರವರ್ತಿ ಅಖಾಡ ಎಂಬ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡುತ್ತಾ ಅವರು ಕೆಲ ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋಡ್ ಅನ್ನು ಚಿನ್ನದಲ್ಲಿ ಮಾಡಿಸಿರುತ್ತಾರೆ ಅಷ್ಟೇ ಅಲ್ಲ ಕೆಲವು ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೂಡ ತೆಗೆದುಕೊಂಡು ಹೋಗಿ ಕೊಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆಯೇ ನಿರ್ಮಾಪಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅನ್ನದಾತರಿಗೆ ಅಪಮಾನ ಎಂದು ದೂರಿನಲ್ಲಿ ಉಲ್ಲೇಖ
ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದು ಕರೆಯುವ ಮೂಲಕ ಅತ್ಯುನ್ನತ ಗೌರವ ನೀಡಿದ್ದರು. ಆದರೆ ಚಂದ್ರಚೂಡ್ ಅವರು ಕೇವಲ ತಮ್ಮ ಯೂಟ್ಯೂಬ್ ಚಾನೆಲ್ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಇಂತಹ ಅಸಭ್ಯ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ನಿರ್ಮಾಪಕರ ಸಂಘ ಆರೋಪಿಸಿದೆ. ನಿರ್ಮಾಪಕರ ಘನತೆ ಮತ್ತು ಮಾನವನ್ನು ಹರಾಜು ಹಾಕುವಂತಹ ಪದಪ್ರಯೋಗ ಮಾಡಿರುವ ಚಂದ್ರಚೂಡ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ಮಾಪಕರ ಸಂಘ
ಈ ವಿವಾದಿತ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಎಚ್ಚೆತ್ತುಕೊಂಡ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ನೇರವಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಮಾಜದಲ್ಲಿ ನಿರ್ಮಾಪಕರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಮತ್ತು ದ್ವೇಷ ಹುಟ್ಟುಹಾಕುವ ಕೆಲಸವನ್ನು ಚಂದ್ರಚೂಡ್ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಎಫ್ ಐ ಆರ್ ದಾಖಲಿಸಬೇಕು ಎಂದು ಸಂಘವು ಪೊಲೀಸರನ್ನು ಒತ್ತಾಯಿಸಿದೆ.
ಸ್ಯಾಂಡಲ್ ವುಡ್ ನಲ್ಲಿ ಆಗಾಗ ಕೇಳಿಬರುತ್ತಿದ್ದ ಕಾಸ್ಟಿಂಗ್ ಕೌಚ್ ಅಥವಾ ಇನ್ನಿತರ ಆರೋಪಗಳ ಸಾಲಿಗೆ ಈಗ ನಿರ್ಮಾಪಕರ ಬಗೆಗಿನ ಈ ಕಾಂಡೋಮ್ ಹೇಳಿಕೆ ಸೇರ್ಪಡೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.







