ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಜಾಹೀರಾತು ಸಮರ ತಾರಕಕ್ಕೇರಿದೆ. ಕೇಂದ್ರ ಸರ್ಕಾರದ ಯೋಜನೆಯೊಂದರ ವಿಚಾರವಾಗಿ ಕಾಂಗ್ರೆಸ್ ಆರಂಭಿಸಿದ ಪೋಸ್ಟರ್ ವಾರ್ಗೆ ಇದೀಗ ಬಿಜೆಪಿ ಪ್ರಬಲ ತಿರುಗೇಟು ನೀಡಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಬಳಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಂಘಪ್ಪನಿಗೆ ಎದುರಾಗಿ ಬಂತು ನುಂಗಪ್ಪ ಅಸ್ತ್ರ
ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರವು ಪತ್ರಿಕೆಗಳಲ್ಲಿ ಜಾಹೀರಾತೊಂದನ್ನು ನೀಡಿತ್ತು. ಅದರಲ್ಲಿ ಸಂಘಪ್ಪ ಎಂಬ ಪಾತ್ರವನ್ನು ಸೃಷ್ಟಿಸಿ, ಬಿಜೆಪಿಯನ್ನು ಪರೋಕ್ಷವಾಗಿ ಲೇವಡಿ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇದೀಗ ಬಿಜೆಪಿ ನುಂಗಪ್ಪ ಸಿರೀಸ್ ಮೂಲಕ ಕೌಂಟರ್ ಅಟ್ಯಾಕ್ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಹೊಸ ವ್ಯಂಗ್ಯಚಿತ್ರದಲ್ಲಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನುಂಗಪ್ಪಗಳು ಎಂದು ಲೇವಡಿ ಮಾಡಲಾಗಿದೆ.
ಅತ್ಯಂತ ವಿವಾದಾತ್ಮಕ ಸಂಗತಿಯೆಂದರೆ, ಅಹಿಂಸೆಯ ಪ್ರತಿಪಾದಕ ಮಹಾತ್ಮ ಗಾಂಧೀಜಿಯವರು ಕೈಯಲ್ಲಿ ಕೋಲು ಹಿಡಿದು ಕಾಂಗ್ರೆಸ್ ನಾಯಕರಿಗೆ ಹೊಡೆಯುವಂತೆ ಈ ಜಾಹೀರಾತಿನಲ್ಲಿ ಚಿತ್ರಿಸಲಾಗಿದೆ.
ಬಿಜೆಪಿ ಜಾಹೀರಾತಿನಲ್ಲೇನಿದೆ?
ಬಿಜೆಪಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರನ್ನೇ ಬಂಡವಾಳ ಮಾಡಿಕೊಂಡ ನುಂಗಪ್ಪಗಳು ಎಂಬ ಶೀರ್ಷಿಕೆ ನೀಡಲಾಗಿದೆ. ಚಿತ್ರದಲ್ಲಿ ಗಾಂಧೀಜಿ ಸಿಟ್ಟಿನಿಂದ ಕಾಂಗ್ರೆಸ್ ನಾಯಕರನ್ನು ಅಟ್ಟಾಡಿಸುವಂತೆ ತೋರಿಸಲಾಗಿದ್ದು, ಸಿದ್ದಪ್ಪ, ರಾಗಪ್ಪ, ಮಲ್ಲಪ್ಪ ಹಾಗೂ ಎಲ್ಲಾ ನುಂಗಪ್ಪಗಳಿರ, ನನ್ನ ಹೆಸರಲ್ಲಿ 60 ವರ್ಷ ಲೂಟಿ ಮಾಡಿದ್ದಲ್ಲದೇ, ನನ್ನ ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ಕುರಿತಾಗಿ ಅಪಪ್ರಚಾರ ಮಾಡ್ತೀರಾ? ಎಂದು ಪ್ರಶ್ನಿಸುವ ಸಾಲುಗಳನ್ನು ಬರೆಯಲಾಗಿದೆ.
ಕಾಂಗ್ರೆಸ್ ಕೆಂಡಾಮಂಡಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬಿಜೆಪಿಯ ಈ ನಡೆಗೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗಾಂಧೀಜಿಯವರನ್ನು ಹಿಂಸಾವಾದಿಯಂತೆ ಬಿಂಬಿಸಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂದು ಗೋಡ್ಸೆಯಿಂದ ಗಾಂಧಿ ಹತ್ಯೆಯಾಗಿತ್ತು, ಇಂದು ಗೋಡ್ಸೆವಾದಿಗಳಿಂದ ಗಾಂಧಿವಾದದ ಹತ್ಯೆಯಾಗುತ್ತಿದೆ ಎಂದು ಮಾರ್ಮಿಕವಾಗಿ ಹರಿಹಾಯ್ದಿದ್ದಾರೆ.
ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ತಮ್ಮ ಕೈಲಿದ್ದ ಕೋಲನ್ನು ಎಂದಿಗೂ ಹಲ್ಲೆಗೆ ಬಳಸಿದವರಲ್ಲ. ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಅವರನ್ನು ಹಿಂಸಾವಾದಿಯನ್ನಾಗಿ ಚಿತ್ರಿಸುತ್ತಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರುತ್ತದೆ. ಗಾಂಧಿಯವರ ಸಿದ್ಧಾಂತವನ್ನೂ ನಾಶ ಮಾಡಲು ಹೊರಟಿರುವ ಇವರಿಂದ ಗಾಂಧೀ ತತ್ವಗಳನ್ನು ರಕ್ಷಿಸಬೇಕಿದೆ ಎಂದು ಖರ್ಗೆ ಕರೆ ನೀಡಿದ್ದಾರೆ.
ಏನಿದು ವಿಬಿ-ಜಿ ರಾಮ್ ಜಿ ವಿವಾದ?
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MNREGA) ಯೋಜನೆಯನ್ನು ರದ್ದುಪಡಿಸಿ, ಅದರ ಬದಲಿಗೆ ವಿಬಿ-ಜಿ ರಾಮ್ ಜಿ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮಿಷನ್ ಗ್ರಾಮೀಣ) ಎಂಬ ಹೊಸ ಯೋಜನೆಯನ್ನು ತರುತ್ತಿದೆ ಎಂಬುದು ಕಾಂಗ್ರೆಸ್ ಆರೋಪ. ಈ ಹೊಸ ಯೋಜನೆಯಿಂದ ಗ್ರಾಮೀಣ ಭಾಗದ ಬಡ ಜನರ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಸರ್ಕಾರಿ ಜಾಹೀರಾತು ಮೂಲಕ ಸಂಘಪ್ಪ ಎಂಬ ಪಾತ್ರವನ್ನು ಬಳಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಉಭಯ ಪಕ್ಷಗಳ ನಡುವಿನ ಈ ಕಾರ್ಟೂನ್ ಸಮರ ವೈಯಕ್ತಿಕ ನಿಂದನೆ ಮತ್ತು ಐತಿಹಾಸಿಕ ಪುರುಷರ ಸಿದ್ಧಾಂತಗಳ ತಿರುಚುವಿಕೆಯ ಹಂತಕ್ಕೆ ತಲುಪಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.








