ರಾಮನಗರದ ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಟೌನ್ಶಿಪ್ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಹೂಡಿರುವ ಆರೋಪಗಳು ಮತ್ತು ಹಚ್ಚಿರುವ ಪೋಸ್ಟರ್ಗಳ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೆಂಡಾಮಂಡಲವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಆದರೂ ಬಿಟ್ಟಿಲ್ಲ ಈ ಕೆಟ್ಟ ಚಾಳಿ
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ ಮೇಲಾದರೂ ಇಂತಹ ಕೆಳಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಬ್ಲೂಫಿಲಂ ಮಾಡಿಸುವುದು ಮತ್ತು ಸುಳ್ಳು ಪೋಸ್ಟರ್ ಅಂಟಿಸುವ ಇವರ ವಿಕೃತ ಮನಸ್ಸು ಬದಲಾಗಿಲ್ಲ. ನನ್ನ ಹೆಂಡತಿಯ ಫೋಟೋವನ್ನು ಪೋಸ್ಟರ್ನಲ್ಲಿ ಹಾಕಿ ಪ್ರಚಾರ ಮಾಡುತ್ತಿರುವುದು ಇವರ ಘನತೆಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದರು.
ಜಮೀನಿನ ಲೆಕ್ಕ ಕೊಟ್ಟ ಕುಮಾರಸ್ವಾಮಿ
ಪೋಸ್ಟರ್ಗಳಲ್ಲಿ ಉಲ್ಲೇಖಿಸಿರುವ 100 ಎಕರೆ ಜಮೀನಿನ ಬಗ್ಗೆ ಸ್ಪಷ್ಟನೆ ನೀಡಿದ ಅವರು, ನಾನು 40 ವರ್ಷಗಳ ಹಿಂದೆಯೇ ಕಷ್ಟಪಟ್ಟು 46 ಎಕರೆ ಜಮೀನು ಖರೀದಿಸಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವ ಜಮೀನು ನನ್ನ ಹೆಸರಿನಲ್ಲಿಲ್ಲ. ನನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಜಮೀನನ್ನು ನ್ಯಾಯಯುತವಾಗಿ ಖರೀದಿ ಮಾಡಿದ್ದಾರೆ. ಇದನ್ನು ನೂರು ಎಕರೆ ಎಂದು ಬಿಂಬಿಸಿ ಪೋಸ್ಟರ್ ಹಚ್ಚುತ್ತಿರುವುದು ರಾಜಕೀಯ ಹತಾಶೆಯ ಪರಮಾವಧಿ ಎಂದು ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ವಿರುದ್ಧ ನೇರ ವಾಗ್ದಾಳಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರೆತ್ತದೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬೆನ್ನಗಾನಹಳ್ಳಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿ ಜಮೀನು ಕಬಳಿಸಿರುವ ವ್ಯಕ್ತಿಗಳು ಇವತ್ತು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾದ ಹಗರಣಗಳ ಬಗ್ಗೆ ಪೋಸ್ಟರ್ ಹಾಕುವ ತಾಕತ್ತು ಇವರಿಗಿದೆಯೇ? ಇಂದಿನ ಕಾಲದಲ್ಲಿ ಇಂತಹ ಪೋಸ್ಟರ್ಗಳನ್ನು ಜನ ನಂಬುವುದಿಲ್ಲ. ಇಂತಹ ಕೆಲಸಗಳಿಂದ ಮುಖ್ಯಮಂತ್ರಿ ಕುರ್ಚಿಗೆ ಗೌರವ ಬರುವುದಿಲ್ಲ ಎಂದು ಹರಿಹಾಯ್ದರು.
ಬಿಡದಿ ಟೌನ್ಶಿಪ್ ವಿರೋಧಕ್ಕೆ ಬೆಂಬಲ
ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಬಿಡದಿ ಟೌನ್ಶಿಪ್ ನಿರ್ಮಾಣವನ್ನು ಜೆಡಿಎಸ್ ವಿರೋಧಿಸುತ್ತಿದೆ. ರೈತರ ಭೂಮಿ ಕಿತ್ತುಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಇಂತಹ ಬೆದರಿಕೆಗಳಿಗೆ ಮತ್ತು ಸುಳ್ಳು ಪೋಸ್ಟರ್ಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದ್ದಾರೆ.








