ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಪರ್ಕ ಕ್ರಾಂತಿಯ ಮೂಲಕ ಆಧುನಿಕ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರು ಎಂದು ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ತಮ್ಮ ರೋಲ್ ಮಾಡೆಲ್ ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿ ಅವರು ಸ್ಯಾಮ್ ಪಿತ್ರೋಡಾ ಅವರೊಂದಿಗೆ ಸೇರಿ ದೇಶದಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದರು. ಆ ಸಂದರ್ಭದಲ್ಲಿ ಅವರು ಕೈಗೊಂಡ ದೂರದೃಷ್ಟಿಯ ಕ್ರಮಗಳ ಪರಿಣಾಮವೇ ಇಂದು ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರವು ಇಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ಖಂಡ್ರೆ ಹೇಳಿದರು.
ಅಂದು ರಾಜೀವ್ ಗಾಂಧಿ ಅವರು ಸಂಪರ್ಕ ಕ್ರಾಂತಿಗೆ ನಾಂದಿ ಹಾಡದಿದ್ದರೆ, ಇಂದು ನಾವು 4G, 5G ಬಳಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಮತ್ತು ಸಂಪರ್ಕ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಬಣ್ಣಿಸಿದ ಖಂಡ್ರೆ, ಅವರ ಆಧುನಿಕ ಭಾರತದ ಕನಸನ್ನು ಸ್ಮರಿಸಿದರು.








