ಬಾಲಿವುಡ್ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ‘ತಾಷನ್’ ಚಿತ್ರದ ಶೂಟಿಂಗ್ ವೇಳೆ ನಡೆದಿದ್ದ ಈ ಸ್ವಾರಸ್ಯಕರ ಘಟನೆಯನ್ನು ಅವರು ‘ಕೌನ್ ಬನೇಗಾ ಕರೋಡ್ಪತಿ 18’ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
‘ತಾಷನ್’ ಶೂಟಿಂಗ್ನಲ್ಲೇ ಆರಂಭವಾಗಿತ್ತು ಪ್ರೀತಿ
2008ರಲ್ಲಿ ಬಿಡುಗಡೆಯಾದ ‘ತಾಷನ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್ ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ನಟಿಸಿದ್ದರು. ಇದೇ ಚಿತ್ರದ ಶೂಟಿಂಗ್ ಸಮಯದಲ್ಲಿ ಸೈಫ್ ಮತ್ತು ಕರೀನಾ ನಡುವೆ ಪ್ರೇಮ ಸಂಬಂಧ ಆರಂಭವಾಗಿತ್ತು ಎಂದು ಸೈಫ್ ಕಾರ್ಯಕ್ರಮದಲ್ಲಿ ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ‘ಕೌನ್ ಬನೇಗಾ ಕರೋಡ್ಪತಿ 18’ ಸಂಚಿಕೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಮುಂಬರುವ ‘ಹೈವಾನ್’ ಚಿತ್ರದ ಪ್ರಚಾರಕ್ಕಾಗಿ ಅಮಿತಾಭ್ ಬಚ್ಚನ್ ಅವರ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಅಮಿತಾಭ್ ಬಚ್ಚನ್ ಅವರು ಸೈಫ್ ಮತ್ತು ಕರೀನಾ ನಡುವಿನ ಪ್ರೇಮ ಯಾವಾಗ ಆರಂಭವಾಯಿತು ಎಂದು ಪ್ರಶ್ನಿಸಿದರು. ಸೈಫ್ ಅವರು ‘ತಾಷನ್’ ಚಿತ್ರದ ಶೂಟಿಂಗ್ ಸಮಯದಲ್ಲೇ ತಮ್ಮ ಪ್ರೇಮಕಥೆ ಆರಂಭವಾಯಿತು ಎಂದು ಹೇಳಿದರು.
ಬೆಳಗ್ಗೆ 4.30ಕ್ಕೆ ನಡೆದಿದ್ದ ಸ್ವಾರಸ್ಯಕರ ಘಟನೆ
ಈ ಸಂದರ್ಭದಲ್ಲಿ ಅಮಿತಾಭ್ ಅವರು, ನಿಮ್ಮಿಬ್ಬರ ಸಂಬಂಧ ಆರಂಭವಾಗುತ್ತಿದ್ದ ದಿನಗಳಲ್ಲಿ ಅಕ್ಷಯ್ಗೆ ಏನಾದರೂ ಗೊತ್ತಿತ್ತೇ? ಎಂದು ಪ್ರಶ್ನಿಸಿದರು.ಅದಕ್ಕೆ ಅಕ್ಷಯ್ ಕುಮಾರ್ ಹಳೆಯ ಘಟನೆಯನ್ನು ನೆನಪಿಸಿಕೊಂಡು ನಗುತ್ತಾ ವಿವರಿಸಿದ್ದಾರೆ.ನಾನು ಪ್ರತಿದಿನ ಬೆಳಗ್ಗೆ 4.30ಕ್ಕೆ ಎದ್ದೇಳುತ್ತಿದ್ದೆ. ಕರೀನಾ ಅವರ ರೂಮ್ ನನ್ನ ರೂಮ್ನ ಪಕ್ಕದಲ್ಲೇ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ಅವರ ರೂಮ್ನ ಬಾಗಿಲು ತೆರೆದುಕೊಂಡಿತು. ಆಗ ಸೈಫ್ ಹೊರಗೆ ಬರುತ್ತಿರುವುದನ್ನು ನೋಡಿದೆ. ‘ಏನು ಮಾಡುತ್ತಿದ್ದೀರಿ?’ ಎಂದು ಕೇಳಿದೆ, ಎಂದು ಅಕ್ಷಯ್ ಹೇಳಿದ್ದಾರೆ.
ಸೈಫ್ ನೀಡಿದ ಉತ್ತರವೇ ಅಕ್ಷಯ್ಗೆ ಮತ್ತಷ್ಟು ಕುತೂಹಲ ಮೂಡಿಸಿತಂತೆ.ಅದಕ್ಕೆ ಸೈಫ್, ‘ಏನಿಲ್ಲ, ನಾವಿಬ್ಬರೂ ಜಾಗಿಂಗ್ಗೆ ಹೋಗುತ್ತಿದ್ದೇವೆ’ ಎಂದರು, ಎಂದು ಅಕ್ಷಯ್ ಹೇಳಿ ನಕ್ಕಿದ್ದಾರೆ.
ಸೈಫ್ಗೆ ಅಕ್ಷಯ್ ತಮಾಷೆಯ ಕಾಲೆಳೆತ
ಅಕ್ಷಯ್ ಅವರ ಮಾತಿಗೆ ಸೈಫ್ ಕೂಡ ತಮಾಷೆಯಾಗಿ, ಹೌದು, ಬೆಳಗಿನ ಜಾಗಿಂಗ್, ಎಂದು ಸೇರಿಕೊಂಡಿದ್ದಾರೆ.
ಇದನ್ನು ಕೇಳಿದ ಅಕ್ಷಯ್, ಹಾಗಾದರೆ ಜಾಗಿಂಗ್ಗೆ ಹೋಗಲು ಕರೀನಾರನ್ನು ಎಬ್ಬಿಸಲು ಬಂದಿದ್ದೀರಾ? ಎಂದು ಸೈಫ್ಗೆ ಕಾಲೆಳೆದಿದ್ದಾರೆ.ಕಾರ್ಯಕ್ರಮದಲ್ಲಿದ್ದ ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲರೂ ಈ ಸ್ವಾರಸ್ಯಕರ ಸಂಭಾಷಣೆಯನ್ನು ಕೇಳಿ ನಕ್ಕಿದ್ದಾರೆ.
2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
‘ತಾಷನ್’ ಚಿತ್ರದ ನಿರ್ಮಾಣದ ಸಮಯದಲ್ಲಿ ಸೈಫ್ ಮತ್ತು ಕರೀನಾ ಡೇಟಿಂಗ್ ಆರಂಭಿಸಿದ್ದರು. ಹಲವು ವರ್ಷಗಳ ಪ್ರೀತಿಯ ಬಳಿಕ 2012ರಲ್ಲಿ ಇಬ್ಬರೂ ವಿವಾಹವಾದರು.ಇಂದು ಬಾಲಿವುಡ್ನ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾಗಿರುವ ಸೈಫ್–ಕರೀನಾ ಅವರಿಗೆ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ (ಜೆಹ್) ಎಂಬ ಇಬ್ಬರು ಪುತ್ರರಿದ್ದಾರೆ.
ಒಟ್ಟಿನಲ್ಲಿ, ವರ್ಷಗಳ ಹಿಂದೆ ‘ತಾಷನ್’ ಶೂಟಿಂಗ್ ವೇಳೆ ನಡೆದಿದ್ದ ಸಣ್ಣ ಘಟನೆಯೊಂದನ್ನು ಅಕ್ಷಯ್ ಕುಮಾರ್ ಈಗ ಬಹಿರಂಗಪಡಿಸಿರುವುದು ಸೈಫ್–ಕರೀನಾ ಅಭಿಮಾನಿಗಳಲ್ಲಿ ಮತ್ತೊಮ್ಮೆ ಕುತೂಹಲ ಮೂಡಿಸಿದೆ.








