ಮನುಷ್ಯತ್ವ ಮರೆತ ಪಾಕಿಸ್ತಾನದಲ್ಲಿ ಇದೀಗ ನಾಯಿ ಸಂಹಾರ ಅಭಿಯಾನ
ಇಸ್ಲಾಮಾಬಾದ್, ಅಗಸ್ಟ್30: ಇತರ ಜೀವಿಗಳ ಬಗ್ಗೆ ಪರಾನುಭೂತಿ ವ್ಯಕ್ತಪಡಿಸುವುದು ಮಾನವತೆಯ ಲಕ್ಷಣಗಳಲ್ಲಿ ಒಂದು. ಈ ಗುಣ ನಮ್ಮಲ್ಲಿದ್ದರೆ ನಾವು ಇತರರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಜೊತೆಗೆ ಇತರರಿಗೆ ಸಹಾಯ ಮಾಡಲು ಮತ್ತು ಇತರರ ಕಾಳಜಿ ವಹಿಸಲು ಬಯಸುತ್ತೇವೆ. ಮಾನವ ತನ್ನ ಬಗ್ಗೆ ಮಾತ್ರ ಯೋಚಿಸದೆ ಸುತ್ತಮುತ್ತಲಿನ ಜೀವಿಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತಾನೆ. ಆದರೆ ಇಂದು ಕೆಲವರು ಪರಾನುಭೂತಿಯನ್ನು ತೋರಿಸಲು ಅಸಮರ್ಥರಾಗಿರುವುದನ್ನು ಕಾಣುತ್ತಿದ್ದೇವೆ. ತಾಂತ್ರಿಕ ಬೆಳವಣಿಗೆಗಳು ಮತ್ತು ಆರ್ಥಿಕ ಬೆಳವಣಿಗೆಯ ಹೊರತಾಗಿಯೂ, ಮಾನವತೆಯಿಂದ ವರ್ತಿಸಲು ಅವರು ವಿಫಲರಾಗುತ್ತಿದ್ದಾರೆ.
ಪಾಕಿಸ್ತಾನದ ಬಹುತೇಕ ಎಲ್ಲಾ ನಗರಗಳ ಬೀದಿಗಳಲ್ಲಿ ಪಾಕಿಸ್ತಾನ ಸರ್ಕಾರವು ಪ್ರತಿವರ್ಷ 50,000 ಕ್ಕೂ ಹೆಚ್ಚು ನಾಯಿಗಳನ್ನು ಕೊಲ್ಲುತ್ತದೆ. ಪಾಕಿಸ್ತಾನ ಯಾವುದೇ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಹೊಂದಿಲ್ಲ ಮತ್ತು ಪ್ರಾಣಿ ದುರುಪಯೋಗ ಮಾಡುವವರ ವಿರುದ್ಧ ಕ್ರಿಮಿನಲ್ ಅಪರಾಧ ಕಾನೂನುಗಳಿಲ್ಲ. ಸರ್ಕಾರವು ಒದಗಿಸುವ ಯಾವುದೇ ಪ್ರಾಣಿ ರಕ್ಷಣಾ ಯೋಜನೆಗಳು ಅಥವಾ ಆಶ್ರಯಗಳು ಅಲ್ಲಿಲ್ಲ ಮತ್ತು ಆ ದೇಶದಲ್ಲಿ ಪ್ರಾಣಿಗಳಿಗೆ ಆಶ್ರಯ ಕಲ್ಪನೆಯು ವಾಸ್ತವದಿಂದ ದೂರವಿದೆ. ಅಲ್ಲಿನ ಜನರಿಗೂ ಸಹ ಪ್ರತಿವರ್ಷ ಸಾವಿರಾರು ನಾಯಿಗಳನ್ನು ಕೊಲ್ಲುವ ಬಗ್ಗೆ ಯಾವುದೇ ಅಭ್ಯಂತರವಿಲ್ಲ
2009 ರಲ್ಲಿ, ಲಾಹೋರ್ ನಗರದಲ್ಲಿ 27,576 ನಾಯಿಗಳು ಕೊಲ್ಲಲ್ಪಟ್ಟವು. 2005 ರಲ್ಲಿ, ಲಾಹೋರ್ ನಗರದಲ್ಲಿ ಕೊಲ್ಲಲ್ಪಟ್ಟ ನಾಯಿಗಳ ಸಂಖ್ಯೆ 34,942 ಆಗಿತ್ತು.
ಕರಾಚಿ ಮತ್ತು ಲಾಹೋರ್‌ನಲ್ಲಿ ಪ್ರತಿ ವರ್ಷ 20,000 ಕ್ಕೂ ಹೆಚ್ಚು ನಾಯಿಗಳನ್ನು ಕೊಂದರೆ, ಸಣ್ಣ ನಗರಗಳಲ್ಲಿ ವರ್ಷಕ್ಕೆ ಸರಾಸರಿ ನಾಯಿ ಕೊಲ್ಲುವ ಪ್ರಮಾಣ 3000 ರಿಂದ 6000 ನಾಯಿಗಳ ವ್ಯಾಪ್ತಿಯಲ್ಲಿರುತ್ತದೆ. ಇದೀಗ ನಗರ ಸರ್ಕಾರದ ಸಾರ್ವಜನಿಕ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಸುಮಾರು 5,000 ನಾಯಿಗಳನ್ನು ಕೊಲ್ಲುವ ಅಭಿಯಾನವನ್ನು ಪ್ರಾರಂಭಿಸಿದೆ.
ಈ ಅಭಿಯಾನವು ಮೂರರಿಂದ ನಾಲ್ಕು ದಿನಗಳ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ ಮತ್ತು ಪ್ರತಿದಿನ ಸುಮಾರು 1,500 ನಾಯಿಗಳನ್ನು ಕೊಲ್ಲುವುದೆಂದು ನಗರ ಸರ್ಕಾರ ಅಂದಾಜಿಸಿದೆ. ಮೊದಲ ನಾಲ್ಕು ದಿನಗಳ ಡ್ರೈವ್ ಸೋಮವಾರದಿಂದ ಪ್ರಾರಂಭವಾಗಿದೆ.
ವ್ಯಾನ್‌ನಲ್ಲಿ ಎಂಟು ಜನರ ತಂಡ ನಾಯಿಗಳನ್ನು ಹುಡುಕುತ್ತಾ ಮುಂದೆ ಸಾಗುತ್ತದೆ ಮತ್ತು ನಾಯಿಗಳನ್ನು ಕಂಡಾಗ ಶೂಟ್ ಮಾಡಿ ಸಾಯಿಸುತ್ತದೆ. ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಲು ನಾಯಿಗಳು ಪಡುವ ಪರಿಪಾಟು ಹೃದಯವಿದ್ರಾವಕವಾಗಿದೆ. ಸಾಕು ಪ್ರಾಣಿಗಳನ್ನು ಮಾನವೀಯತೆ ಮರೆತು ಸಾಯಿಸುತ್ತಿರುವ ಈ ಅನಾಗರಿಕ ಪದ್ಧತಿ ಅಲ್ಲಿನ ಜನರ ಸಂಕುಚಿತ ಮನಸ್ಸಿಗೆ ಉತ್ತಮ ಉದಾಹರಣೆಯಾಗಿದೆ.








