ಜಗತ್ತು ಕೊರೋನಾ ವೈರಸ್ ನ ಭೀತಿಯಿಂದ ತತ್ತರಿಸಿ ಹೋಗಿದೆ. ಯುರೋಪ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಕೊರೊನಾಗೆ ಇಟಲಿಯಲ್ಲಿ ಬಲಿಯಾಗುತ್ತಿದ್ದಾರೆ. ಸಾವಿನ ಸಂಖ್ಯೆ 1,266ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಜನ ಮನೆಯಿಂದ ಹೊರಗೆ ಬರದಂತ ವಾತಾವರಣ ಇಟಲಿಯಲ್ಲಿ ಸೃಷ್ಟಿಯಾಗಿದ್ದು, ಸರಕಾರ ದಿನಕ್ಕೊಂದು ಕಠಿಣ ಕಾನೂನುಗಳನ್ನು ಜಾರಿಗೆ ತಂದು ಕೊರೋನಾ ತಡೆಗಟ್ಟಲು ಪ್ರಯತ್ನಿಸುತ್ತಿದೆ.
ಇವೆಲ್ಲದರ ಮಧ್ಯೆ ಇಂದು ಇಟಲಿಯ ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿತು.
ಇಟಲಿಯಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ. ಸುಮಾರು 24, 747 ಮಂದಿ ಕೊರೋನಾ ಸೋಂಕಿತರಿದ್ದಾರೆ. 1809 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಆಸ್ಪತ್ರೆಗಳ ಕೊರತೆ ಉಂಟಾಗಿರುವುದರಿಂದ 80 ವರ್ಷಕ್ಕೂ ಮೇಲ್ಪಟ್ಟವರಿಗೆ ಐಸಿಯುನಲ್ಲಿ, ಚಿಕಿತ್ಸೆ ನೀಡುವುದನ್ನು ನಿಲ್ಲಿಸಲು ಯೋಚಿಸಲಾಗುತ್ತಿದೆ. ಸೋಂಕು ತಗುಲಿದ ಎಲ್ಲರಿಗೂ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂಬ ಇಟಲಿ ಪ್ರಧಾನಿಯ ಹೇಳಿಕೆಯನ್ನು ಆಂಗ್ಲ ಮಾಧ್ಯಮವೊಂದು ಪ್ರಕಟ ಮಾಡಿತ್ತು. ಇದನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಜೀಸಸ್ ಲವ್ ಆಲ್ ಎಂದು ಶೀರ್ಷಿಕೆ ಯೊಂದಿಗೆ ಟ್ವೀಟ್ ನಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ರಿಟ್ವೀಟ್ ಮಾಡಿದ್ದ ಡಾಲಿ ಧನಂಜಯ ‘ಏನಾದರು ಆಗು ಮೊದಲು ಮಾನವನಾಗು’ ಎಂಬ ಕುವೆಂಪು ಅವರ ಸಾಲಿನ ಮೂಲಕ ಆಕ್ಷೇಪ ವ್ಯಕ್ತಪಡಿಸಿದರು.

ತಮ್ಮ ಶೀರ್ಷಿಕೆಗೆ ಸ್ಪಷ್ಟನೆ ನೀಡಿರುವ ಚಕ್ರವರ್ತಿ ಸೂಲಿಬೆಲೆ
ಕ್ಷಮಿಸಿ, ನನ್ನ ಟ್ವೀಟ್ ಸರಿ ಮಾಡಿಕೊಳ್ಳುತ್ತಿದ್ದೇನೆ. ವಿಶ್ವದಾದ್ಯಂತ ಸಂಚರಿಸುವ ಮಿಷನರಿಗಳ ಸಂದೇಶವನ್ನು ನಾನು ನನ್ನ ಟ್ವೀಟ್ ನಲ್ಲಿ ಬಳಕೆ ಮಾಡಿಕೊಂಡಿದ್ದೆ. ಜೀಸಸ್ ಎಲ್ಲರನ್ನೂ ಪ್ರೀತಿಸುತ್ತಾನೆ. ಆದರೆ 80 ವರ್ಷದ ಮೇಲಿನವರನ್ನು ಹೊರತುಪಡಿಸಿ ! ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ ! ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ ಆದರೆ 80 ಕ್ಕಿಂತ ಹೆಚ್ಚು ವಯಸ್ಸಿನ ಜನರನ್ನು ಪ್ರೀತಿಸುವುದಿಲ್ಲ ! ಯಾರೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಿರಿ ಗಮನಿಸಿ ವ್ಯಾಟಿಕನ್ ಸಿಟಿ ಇಟಲಿಗೆ ಹತ್ತಿರವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇಬ್ಬರ ಟ್ವೀಟ್ ಗೂ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕೊರೋನಾ ಕಾರಣಕ್ಕೆ ಇಡೀ ವಿಶ್ವವೇ ಆತಂಕದಲ್ಲಿರುವಾಗ ಈ ಟ್ವೀಟ್ ಸಮರದ ಅಗತ್ಯವಿತ್ತೇ ಎಂಬ ಪ್ರಶ್ನೆ ನಮ್ಮ ಮುಂದಿದೆ.








