ಚೀನಾದ ವುಹಾನ್ ನಲ್ಲಿ ಆರಂಭವಾದ ಕೊರೊನಾ ವೈರಸ್ ಇಡೀ ಜಗತ್ತನ್ನೇ ಇಂದು ಆತಂಕಕ್ಕೆ ತಳ್ಳಿದೆ. ವಿಶ್ವದಾದ್ಯಂತ 9 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊರೊನಾ ಸೋಂಕು ಇದೀಗ ಚೀನಾದಲ್ಲಿ ಹತೋಟಿಯಲ್ಲಿದ್ದು, ಹೊಸ ಪ್ರಕರಣ ವರದಿಯಾಗಿಲ್ಲ.
ಆದರೆ ಇಟಲಿಯಲ್ಲಿ ಕೊರೊನಾ ಸೋಂಕು ಭೀಕರವಾಗಿ ಹರಡುತ್ತಿದ್ದು, ಸಾವಿನ ಪಟ್ಟಿಯಲ್ಲಿ ಚೀನಾವನ್ನೇ ಇಟಲಿ ಮೀರಿಸಿದೆ. 6 ಕೋಟಿ ಜನಸಂಖ್ಯೆ ಇರುವ ಇಟಲಿಯಲ್ಲಿ ಈ ವರೆಗೆ ಬಲಿಯಾದವರ ಸಂಖ್ಯೆ 3406. ಮಾರ್ಚ್ 15 ರ ಬಳಿಕ ಅಲ್ಲಿ ಪ್ರತಿ ದಿನ 350ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ ಇದುವರೆಗೆ 3249 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೊದಲ ಬಾರಿ ಕೊರೊನಾ ಕಾಣಿಸಿಕೊಂಡ ರಾಷ್ಟ್ರ ಚೀನಾ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡ ಕೊರೊನಾ ನಂತರ ಹಲವು ರಾಷ್ಟ್ರಗಳಿಗೆ ಹಬ್ಬಿತ್ತು. ಅದರಲ್ಲಿ ಇಟಲಿಯೂ ಒಂದು. ಆದರೆ ಇಟಲಿ, ಚೀನಾವನ್ನು ಸಾವಿನ ಸಂಖ್ಯೆಯಲ್ಲಿ ಮೀರಿಸಿದ್ದು, ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ. ವಿಶ್ವ ಸಂಸ್ಥೆ ಮತ್ತು ಇಟಲಿ ಅಧಿಕಾರಿಗಳು ಸಾವಿನ ಸಂಖ್ಯೆ ಹೆಚ್ಚಾಗಿರುವುದಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದಾರೆ.
ಇಟಲಿ ಜಗತ್ತಿನಲ್ಲಿ ಎರಡನೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಿರಿಯ ನಾಗರಿಕರನ್ನು ಹೊಂದಿದ್ದು, ಅಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 70ರ ಆಸುಪಾಸಿನವರು. ಅಧಿಕೃತ ವರದಿಗಳ ಪ್ರಕಾರ ಚೀನಾದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 80,928 ಮತ್ತು ಇಟಲಿಯಲ್ಲಿ 41,035. ಚೀನಾದಲ್ಲಿ ಹೊಸ ಕೊರೊನಾ ಸೋಂಕು ಪ್ರಕರಣಗಳು ಸಂಖ್ಯೆ 8 ಆಗಿದ್ದರೆ, ಇಟಲಿಯಲ್ಲಿ 427. ಚೀನಾದಲ್ಲಿ ಕೊರೊನಾ ಸೋಂಕಿನಿಂದ 70,420 ಜನರು ಗುಣಮುಖರಾಗಿದ್ದರೆ, ಇಟಲಿಯಲ್ಲಿ 4,440 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.