ವಾಮಾಚಾರ : ಬಾಲಕಿಯ ಬಲಿ ಕೊಡುವ ಯತ್ನ – ಮಾಂತ್ರಿಕ ಸೇರಿ 6 ಮಂದಿ ಬಂಧನ
ಬೆಂಗಳೂರು : ಮನೆ ಮುಂದೆ ಆಟ ಆಡುತ್ತಿದ್ದ 10 ವರ್ಷದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ನರಬಲಿ ನೀಡಲು ಯತ್ನಿಸಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜೂ.14 ರಂದು ದೇವರ ಪೂಜೆ ಹೆಸರಿನಲ್ಲಿ ಬಾಲಕಿಯ ಮೇಲೆ ವಾಮಾಚಾರ ಮಾಡಿದ್ದು, ಬಲಿ ನೀಡಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಲಾದ ಹನುಮಂತಯ್ಯ, ಸುರೇಶ್, ರವಿ, ಸೌಮ್ಯ ಶಿವರಾಜು, ಹಾಗೂ ಮಾಂತ್ರಿನೊಬ್ಬ ಸೇರಿ ಇಂತಹ ಹೇಯ ಕೃತ್ಯಕ್ಕೆ ಕೈಹಾಕಿದ್ದು, ಎಲ್ಲರೂ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಬಾಲಕಿಯನ್ನ ಅಪಹರಿಸಿ ವಾಮಾಚಾರ ಮಾಡಿ ಹೊಲವೊಂದರಲ್ಲಿ ನರಬಲಿಗೆ ಯತ್ನಿಸಿದ್ದರು ಎಂದು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯನ್ನು ಎಳೆದೊಯ್ದು ಹೊಲದಲ್ಲಿನ ಗುಡಿಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕನೊಬ್ಬ ಕ್ಷುದ್ರ ಪೂಜೆ ಮಾಡಿದ ಬಳಿಕ ಬಲಿ ಪೂಜೆ ನಡೆಸಲಾಗಿದೆ. ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕಲು ಆರಂಭಿಸಿದ್ದರು. ಆಗ ಗುಡಿಯ ಬಳಿ ಬಾಲಕಿ ಪತ್ತೆಯಾಗಿದ್ದು, ವಾಮಾಚಾರಿಗಳಿಂದ ಬಾಲಕಿಯ ಪ್ರಾಣ ರಕ್ಷಣೆ ಮಾಡಿದ್ದಾರೆ.








