ಕಲಬುರಗಿ: ಅವರೆಲ್ಲ ಡಿಗ್ರಿ ಮುಗಿಸಿ ಖಾಸಗಿ ಶಾಲೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಸಂಬಳದಿಂದ ಜೀವನ ನಡೆಸ್ತಿದ್ದರು. ಆದ್ರೆ, ಕಳೆದ ನಾಲ್ಕು ತಿಂಗಳಿಂದ ಅವರೆಲ್ಲರೂ ಕೈಯಲ್ಲಿ ಕೆಲಸವಿಲ್ಲದೇ ತುತ್ತಿನ ಚೀಲ ತುಂಬಿಕೊಳ್ಳಲು ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿದ್ರೆ ಎಂಥವರ ಕರುಳು ಚುರ್ ಎನ್ನದೇ ಇರದು.
ಹೌದು, ಒಬ್ಬರು ಶಿಕ್ಷಕ ಹಸು ಕಾಯುತ್ತಿದ್ದರೆ, ಇನ್ನೊಬ್ಬರು ಗಾರೆ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ ಇವರೆಲ್ಲ ಪದವಿ ಮುಗಿಸಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದವರು. ಲಾಕ್ಡೌನ್ ಸಂಕಸ್ಟಕ್ಕೆ ಸಿಲುಕಿ ನೌಕರಿ ಇಲ್ಲದೇ ಸಂಬಳವೂ ಇಲ್ಲದೇ ಪರದಾಡುತ್ತಿರುವ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಖಾಸಗಿ ಶಾಲೆಗಳ ಅದೆಷ್ಟೋ ಶಿಕ್ಷಕರ ಸ್ಥಿತಿ ಇದೇ ಆಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಬಹುತೇಕ ಖಾಸಗಿ ಶಾಲೆಗಳ ಶಿಕ್ಷಕರು ಸಂಸಾರ ಸಾಗಿಸಲಾಗದೇ ಇರುವುದೆಲ್ಲವನ್ನೂ ಮಾರಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸರ್ಕಾರ ಈ ವಿಷಯಕ್ಕೆ ಸ್ಪಂದಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಒಟ್ಟಾರೆ ಮಕ್ಕಳ ಬದುಕು ಬೆಳಕಾಗಿಸುವ ಗುರುಗಳ ಜೀವನವೇ ಕತ್ತಲೆಯಲ್ಲಿ ನರಳಾಡುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಂದಿಸುತ್ತಾ ಕಾದು ನೋಡಬೇಕಿದೆ.