ಬೆಂಗಳೂರು: ಇಂದಿರಾನಗರದ ಹೋಟೆಲ್ ನಲ್ಲಿ ಯುವತಿಯ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿ ಪಾಪಿಯು ಪ್ರೇಯಸಿಯನ್ನು ಹತ್ಯೆ ಮಾಡಿ ಶವದ ಜೊತೆ ಕುಳಿತು ಇಡೀ ರಾತ್ರಿ ಸಿಗರೇಟ್ ಸೇದಿದ್ದ ಎಂದು ತಿಳಿದು ಬಂದಿದೆ.
ಎರಡು ದಿನ ಪ್ರೇಯಸಿ ಜೊತೆ ಕಾಲ ಕಳೆದು ನಂತರ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಮಂಗಳವಾರ ಗಾಬರಿಯಲ್ಲೇ ಹೊರಟಿದ್ದಾನೆ. ರೂಂ ನಿಂದ ಹಂತಕ ಹೊರಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ.
ಕೊಲೆ ಬಳಿಕ ಪ್ರೇಯಸಿಯ ಮೃತದೇಹವನ್ನ ಪೀಸ್ ಪೀಸ್ ಮಾಡುವ ಆಲೋಚನೆಯಲ್ಲಿ ಆತ ಇದ್ದ ಎನ್ನಲಾಗಿದೆ. ಹೋಟೆಲ್‌ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ವರೆಗೂ ಹೋಗಿದ್ದಾನೆ. ಆ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಕೇರಳಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಯಾಗಿರುವ ಮಾಯ ಅವರ ಅಕ್ಕ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಮತ್ತೊಬ್ಬನ ಜೊತೆ ವಾಸವಾಗಿದ್ದಾರೆ. ಶುಕ್ರವಾರ ಅಕ್ಕನಿಗೆ ಕಾಲ್ ಮಾಡಿ, ‘ಆಫೀಸ್ ಪಾರ್ಟಿ ಇದೆ. ರಾತ್ರಿ ಬರಲ್ಲ’ ಎಂದಿದ್ದಳು. ಶನಿವಾರ ಕೂಡ ಮೆಸೇಜ್ ಮಾಡಿ, ‘ಇಂದೂ ಪಾರ್ಟಿಯಿದ್ದ ರೂಂಗೆ ಬರಲ್ಲ’ ಎಂದು ಹೇಳಿದ್ದಳು. ಆರೋಪಿ ಹಾಗೂ ಯುವತಿ ಕಳೆದ 6 ತಿಂಗಳಿಂದ ಪ್ರೀತಿಯಲ್ಲಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಹೋಟೆಲ್ ಗೆ ಬರುವುದಕ್ಕೂ ಮುನ್ನ ಹಳೆಯ ಚಾಕು ತಂದಿದ್ದ. ನೈಲಾನ್ ದಾರವನ್ನು ಆರ್ಡರ್ ಮಾಡಿದ್ದ. ಇದನ್ನು ಗಮನಿಸಿದರೆ, ಪ್ಲಾನ್ ಮಾಡಿಯೇ ಹಂತಕ ಕೊಲೆ ಮಾಡಿದ್ದಾನೆ ಎಂಬುವುದು ಮೇಲ್ನೊಟಕ್ಕೆ ತಿಳಿದು ಬಂದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.








