ಚಂಡೀಗಢ: ಕನಸಿನಲ್ಲಿ ಬಂದು ದೇವಿ ನರಬಲಿ ಕೇಳಿದ್ದಾಳೆಂದು ಮಹಿಳೆಯೊಬ್ಬಳು ವ್ಯಕ್ತಿಯೊಬ್ಬಾತನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಹರಿಯಾಣದ ಅಂಬಾಲಾ ಎಂಬಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಮಹೇಶ್ ಗುಪ್ತಾ (44) ಎಂದು ಗುರುತಿಸಲಾಗಿದೆ. ಪ್ರಿಯಾ ಎಂಬ ಮಹಿಳೆಯೇ ಹತ್ಯೆ ಮಾಡಿರುವ ಆರೋಪಿ. ಪರಿಚತ ವ್ಯಕ್ತಿಯನ್ನೇ ಮಹಿಳೆ ಕೊಲೆ ಮಾಡಿದ್ದಾಳೆ.
ಕೊಲೆಯಾಗಿರು ಮಹೇಶ್ ಅಂಗಡಿಯೊಂದರ ಮಾಲೀಕ. ಈತ ಮಹಿಳೆಯ ಮನೆಗೆ ಅಂಗಡಿಯಿಂದ ಕೆಲವು ವಸ್ತುಗಳನ್ನು ನೀಡುವುದಕ್ಕಾಗಿ ಬಂದಿದ್ದ. ಈ ಸಂದರ್ಭದಲ್ಲಿ ಆರೋಪಿ ಪ್ರಿಯಾ ಹಾಗೂ ಕುಟುಂಬ ಸೇರಿ ಹತ್ಯೆ ಮಾಡಿದೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಪ್ರಿಯಾಳನ್ನು ಮಹೇಶ್ ತನ್ನ ಸಹೋದರಿ ಎಂದು ಪರಿಗಣಿಸಿದ್ದ. ತನ್ನ ಅಂಗಡಿಯಿಂದ ಕೆಲವು ವಸ್ತುಗಳನ್ನು ಅವಳ ಮನೆಗೆ ತಲುಪಿಸಲು ಹೋಗಿದ್ದ. ಅವರು ಹಿಂದಿರುಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಮಹೇಶ್ ಸಹೋದರ ತಿಳಿಸಿದ್ದಾನೆ.
ಗುಪ್ತಾ ಸ್ಕೂಟರ್ ಪ್ರಿಯಾಳ ಮನೆಯ ಹತ್ತಿರ ಪತ್ತೆಯಾಗಿತ್ತು. ಈ ಸಂದರ್ಭದಲ್ಲಿ ಮನೆ ಬಾಗಿಲು ತೆರೆದಾಗ ಹಲ್ಲೆ ನಡೆಸುತ್ತಿರುವುದು ಗೊತ್ತಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾ, ಅವಳ ಸಹೋದರ ಹೇಮಂತ್ ಹಾಗೂ ಸೊಸೆ ಪ್ರೀತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.