ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸುವ ವಿಷಯದಲ್ಲಿ ಸತತ 100 ಗಂಟೆಗಳ ಕಾಲ ಅಳುವ ಪ್ರಯತ್ನ ಮಾಡಿದ್ದ ನೈಜೀರಿಯಾದ ತೆಂಬು ಎಬೆರೆ ಎಂಬ ವ್ಯಕ್ತಿ ಕಣ್ಣು ಕಳೆದುಕೊಂಡಿರುವ ಘಟನೆ ನಡೆದಿದೆ.
ಎಬೆರೆ ತನಗೆ ಎದುರಾಗಿದ್ದ ಆರೋಗ್ಯದ ದುಃಸ್ಥಿತಿ ಖಚಿತಪಡಿಸಿದ್ದಾನೆ. ನಿರಂತರವಾಗಿ ಕಣ್ಣೀರು ಸುರಿಸುವ ಮೂಲಕ ನಿರ್ಮಿಸಲಾಗಿದ್ದ ದಾಖಲೆಯನ್ನು ಮುರಿಯುವುದು ಆತನ ಗುರಿಯಾಗಿತ್ತು. ಆತನಲ್ಲಿ ತೀವ್ರ ತಲೆನೋವು, ಕಣ್ಣಿನ ಉರಿ ಉಂಟಾಗಿ ಮುಖ ಊದಿಕೊಂಡಿತ್ತು. ನಂತರ 45 ನಿಮಿಷಗಳ ಕಾಲ ತಾತ್ಕಾಲಿಕವಾಗಿ ದೃಷ್ಟಿ ಸಮಸ್ಯೆ ಎದುರಿಸಿದ್ದ.
ಕೆಲವು ನಿಮಿಷಗಳ ಕಾಲ ಕುರುಡುತನದ ಕತ್ತಲು ಅನುಭವಿಸಿದ್ದರೂ, ಆತ ತನ್ನ ಈ ಹುಚ್ಚು ಸಾಹಸ ಬಿಟ್ಟಿರಲಿಲ್ಲ. ನಿರಂತರ ಒಂದು ವಾರ ಕಣ್ಣೀರು ಸುರಿಯುವ ತನ್ನ ದೃಢಸಂಕಲ್ಪದ ಕುರಿತು ಹೇಳಿರುವ ಆತ, ನಾನು ಇದರ ಕುರಿತು ಹೊಸತಾಗಿ ತಯಾರಿ ನಡೆಸಬೇಕು ಮತ್ತು ನನ್ನ ಗೋಳಾಟ ಕಡಿಮೆ ಮಾಡಬೇಕು ಎಂದು ಹೇಳಿದ್ದಾನೆ.
ಒಂದು ಕ್ಷಣವೂ ಬಿಡದೆ ಏಳು ದಿನಗಳ ಕಾಲ ಸತತವಾಗಿ ಅಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಲು ಬಯಸಿರುವುದಾಗಿ ಎಬೆರೆ ಹೇಳಿಕೊಂಡಿದ್ದ. ನೈಜೀರಿಯಾದ ಮತ್ತೊಬ್ಬ ಮಹಿಳೆ ಜಾಯ್ಸ್ ಇಜೆಯೊಮಾ ಇಂತಹದೇ ಹುಚ್ಚು ಸಾಹಸ ಮಾಡಲು ಹೋಗಿ ಅಸ್ವಸ್ಥಳಾಗಿದ್ದಳು. ಜಾಯ್ಸ್, ಸತತ 72 ಗಂಟೆಗಳ ಸುದೀರ್ಘ ಅವಧಿ ಬಾಡಿ ಮಸಾಜ್ ಮಾಡುವ ದಾಖಲೆ ನಿರ್ಮಿಸಲು ಹೋಗಿ ಬಳಲಿಕೆಯಿಂದ ಕುಸಿದು ಬಿದ್ದಿದ್ದಳು.
ನೈಜೀರಿಯಾದ ಜನರಲ್ಲಿ ದಾಖಲೆಗಳನ್ನು ನಿರ್ಮಿಸುವ ಹುಚ್ಚು ಹೆಚ್ಚಾಗಿದೆ. ಮೇ ತಿಂಗಳಲ್ಲಿ 26 ವರ್ಷದ ಹಿಲ್ದಾ ಬಸಿ ಎಂಬ ಶೆಫ್, ಲಾಗೋಸ್ ರೆಸ್ಟೋರೆಂಟ್ನಲ್ಲಿ 93 ಗಂಟೆ ಮತ್ತು 11 ನಿಮಿಷಗಳ ಕಾಲ ನಿರಂತರವಾಗಿ ಅಡುಗೆ ತಯಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಳು. ಆಗನಿಂದ ಇಂತಹ ನಿರ್ಮಾಣಕ್ಕೆ ಎಬೆರೆ ಕೂಡ ಮುಂದಾಗಿದ್ದರು.