ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಖಾತೆ ತೆರೆದಿದೆ.
ದೋಡಾದಲ್ಲಿ ಪಕ್ಷವು ಜಯ ಸಾಧಿಸಿದೆ. ಎಎಪಿಯ ಮೆಹರಾಜ್ ಮಲಿಕ್ ದೋಡಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮಲಿಕ್ 22,944 ಮತಗಳನ್ನು ಪಡೆದು 18174 ಮತಗಳನ್ನು ಪಡೆದ ಬಿಜೆಪಿ ಅಭ್ಯರ್ಥಿ ರಾಣಾ ಅವರನ್ನು 4770 ಮತಗಳ ಅಂತರದಿಂದ ಸೋಲಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ನ ಖಾಲಿದ್ ನಜೀಬ್ ಸುಹರ್ವರ್ಡಿ 12975 ಮತ ಪಡೆದು ಮೂರನೇ ಸ್ಥಾನದಲ್ಲಿ ಉಳಿದಿದ್ದಾರೆ. ಈ ಮೂಲಕ ಆಪ್ ಪಕ್ಷ ಕಣಿವೆ ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ದೋಡಾ ಜಿಲ್ಲಾ ಅಭಿವೃದ್ಧಿ ಮಂಡಳಿಯ ಸದಸ್ಯ ಮಲಿಕ್, ಸ್ಥಳೀಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಆಗಾಗ ಸುದ್ದಿಯಲ್ಲಿದ್ದರು. ಕೆಲ ಕಂದಾಯ ಅಧಿಕಾರಿಗಳ ಕಚೇರಿಗಳನ್ನು ಬಂದ್ ಮಾಡಿ ಅಥವಾ ರಸ್ತೆ ತಡೆ ನಡೆಸಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಹೀಗಾಗಿ ಜನರಿಗೆ ಹತ್ತಿರವಾಗಿದ್ದರು. ಸದ್ಯ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ.
ಮೆಹ್ರಾಜ್ ಮಲಿಕ್ ಅವರನ್ನು ದೋಡಾ ಪ್ರದೇಶದ ಜನಪ್ರಿಯ ನಾಯಕ ಎಂದು ಪರಿಗಣಿಸಲಾಗಿದೆ. ದೋಡಾ ಪ್ರದೇಶವು ಮುಸ್ಲಿಂ ಪ್ರಾಬಲ್ಯ ಹೊಂದಿದೆ. 2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೋಡಾ ಸ್ಥಾನವನ್ನು ಗೆದ್ದಿತ್ತು.








