Asia cup 2022 – ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿ VVS ಲಕ್ಷ್ಮಣ್ ನೇಮಕ
ಮುಂಬರುವ ಏಷ್ಯಾ ಕಪ್ 2022 ಟೂರ್ನಿಗೆ ಟೀಮ್ ಇಂಡಿಯಾದ ಹಂಗಾಮಿ ಹೆಡ್ ಕೋಚ್ ಆಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇಮಕಗೊಂಡಿದ್ದಾರೆ. ಟೀಂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೋವಿಡ್ 19 ಗೆ ತುತ್ತಾಗಿರುವುದರಿಂದ ಅವರ ಮಾರ್ಗದರ್ಶನ ಲಭ್ಯವಿರುವುದಿಲ್ಲ. ಹಾಗಾಗಿ ಏಷ್ಯಾ ಕಪ್ ಜವಬ್ದಾರಿಯನ್ನ ಜಿಂಬಾಬ್ವೆ ಪ್ರವಾಸದಲ್ಲಿ ಕೋಚ್ ಆಗಿದ್ದ ವಿವಿಎಸ್ ಲಕ್ಷಣ್ ವಹಿಸಿಕೊಂಡಿದ್ದಾರೆ.
ಯುಎಇಗೆ ಪ್ರಯಾಣ ಬೆಳೆಸುವ ಮುನ್ನ ನಡೆಸಿದ್ದ ಕೋವಿಡ್ ಟೆಸ್ಟ್ ಪರೀಕ್ಷೆಯಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ರಾಹುಲ್ ದ್ರಾವಿಡ್ ಐಸೋಲೆಷನ್ ನಲ್ಲಿದ್ದಾರೆ. ಅವರಿಗೆ ನೆಗೆಟಿವ್ ವರದಿ ಬಂದ ತಕ್ಷಣವೇ ಅವರು ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಲಕ್ಷ್ಮಣ್ ಜಿಂಬಾಬ್ವೆಯ ಹರಾರೆಯಿಂದ ಯುಎಇಗೆ ಪ್ರಯಾಣ ಕೂಡ ಬೆಳೆಸಿದ್ದಾರೆ. ಅವರ ಜೊತೆಯಲ್ಲಿ ಕೆ.ಎಲ್. ರಾಹುಲ್, ಆವೇಶ್ ಖಾನ್ ಮತ್ತು ದೀಪಕ್ ಹೂಡಾ ಕೂಡ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಭಾರತದಿಂದ ಯುಎಇಗೆ ಪ್ರಯಾಣಿಸಿದ್ದಾರೆ.
ಏಷ್ಯಾಕಪ್ ಟೂರ್ನಿ ಆಗಸ್ಟ್ 27ರಿಂದ ಆರಂಭವಾಗಲಿದೆ. ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.