ಏಷ್ಯನ್ ಗೇಮ್ಸ್-2023 ಪುರುಷರ ಟಿ20 ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ಪಂದ್ಯ ನಾಳೆ(ಅ.6) ನಡೆಯಲಿದ್ದು, ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಹಣಾಹಣಿ ನಡೆಸಲಿವೆ.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುವ ಸೆಮೀಸ್ ಹಣಾಹಣಿಗೆ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳ ತಂಡವನ್ನ 23 ರನ್‌ಗಳಿಂದ ಮಣಿಸಿದ ಭಾರತ ಸೆಮಿಫೈನಲ್‌ಗೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದೆಡೆ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷಿಯಾ ವಿರುದ್ಧ 2 ರನ್‌ಗಳ ರೋಚಕ ಗೆಲುವು ಸಾಧಿಸಿದ್ದ ಬಾಂಗ್ಲಾದೇಶ, ಸೆಮೀಸ್‌ಗೆ ಲಗ್ಗೆಯಿಟ್ಟಿದೆ. ಗೆಲುವಿನ ಆತ್ಮವಿಶ್ವಾಸದಲ್ಲಿರುವ ಎರಡು ತಂಡಗಳು ಸೆಮೀಸ್‌ನಲ್ಲೂ ಇದೇ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿವೆ.
ನೇಪಾಳ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಫಾರ್ಮ್‌ನಲ್ಲಿದ್ದು, ಸೆಮೀಸ್‌ನಲ್ಲಿ ಸಹ ಮತ್ತೊಂದು ಅದ್ಭುತ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಇವರೊಂದಿಗೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಸೇರಿದಂತೆ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ತಿಲಕ್ ವರ್ಮ, ಜಿತೇಶ್ ಶರ್ಮ, ಶಿವಂ ದುಬೆ ಅವರುಗಳಿಂದ ಅತ್ಯುತ್ತಮ ಪ್ರದರ್ಶನ ಬರುವ ನಿರೀಕ್ಷೆ ಇದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್, ಇನ್ನೊಂದು ಸ್ಪೋಟಕ ಇನ್ನಿಂಗ್ಸ್ ಆಡಲು ಸಜ್ಜಾಗಿದ್ದಾರೆ.
ಟೀಂ ಇಂಡಿಯಾದ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ವಿಭಾಗವೂ ಅತ್ಯಂತ ಬಲಿಷ್ಠವಾಗಿದೆ. ವೇಗಿಗಳಾದ ಅರ್ಶದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್ ಅವರುಗಳ ಜೊತೆಗೆ ರವಿ ಬಿಷ್ಣೋಯಿ ಹಾಗೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗದಲ್ಲಿ ತಂಡಕ್ಕೆ ಆಸರೆ ಆಗುವ ನಿರೀಕ್ಷೆ ಹೆಚ್ಚಾಗಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷಿಯಾ ವಿರುದ್ಧ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದ ಬಾಂಗ್ಲಾದೇಶಕ್ಕೆ ಬೌಲರ್‌ಗಳು ಆಸರೆಯಾಗಿದ್ದರು. ಹೀಗಾಗಿ ಟೀಂ ಇಂಡಿಯಾ ವಿರುದ್ದದ ಸೆಮೀಸ್ ಹಣಾಹಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕಿದೆ. ಒಂದೊಮ್ಮೆ ಭಾರತದ ವಿರುದ್ಧವೂ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರೆ ಪಂದ್ಯವನ್ನ ಗೆಲ್ಲುವುದು ಕಷ್ಟಕರವಾಗಲಿದೆ.