ಶಿಕ್ಷಕರ ಮೇಲೆ ಕಸದ ಬುಟ್ಟಿ ಹಾಕಿ ವಿದ್ಯಾರ್ಥಿಗಳಿಂದ ಕುಚೇಷ್ಠೆ ಪ್ರಕರಣ ದಾಖಲು
ದಾವಣಗೆರೆ ಜಿಲ್ಲೆಯ ಚೆನ್ನಗಿರಿಯ ಶಾಲೆಯೊಂದರಲ್ಲಿ ಹಿಂದಿ ಶಿಕ್ಷಕ ಪ್ರಕಾಶ್ ಅವರಿಗೆ ವಿದ್ಯಾರ್ಥಿಗಳು ಹಿಂದೆಯಿಂದ ವಸ್ತುಗಳನ್ನು ಎಸೆಯುವುದು, ಕಸದ ಬುಟ್ಟಿಯನ್ನು ತಲೆ ಮೇಲೆ ಹಾಕುವುದು, ಹೊಡೆಯುವುದು ಮಾಡಿದ್ದಾರೆ. ಹತ್ತನೇ ತರಗತಿಯ ಸಿ ಕ್ಲಾಸ್ನ ನಾಲ್ವರು ವಿದ್ಯಾರ್ಥಿಗಳಿಂದ ಕೃತ್ಯ ನಡೆದಿದ್ದು,
ಓರ್ವ ವಿದ್ಯಾರ್ಥಿ ಮೊಬೈಲ್ನಲ್ಲಿ ಈ ವಿಡಿಯೋ ರೆಕಾರ್ಡ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. 59 ವರ್ಷದ ಪ್ರಕಾಶ ಬೋಗಿ ಎಂಬ ಹಿಂದಿ ಶಿಕ್ಷಕನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿಗಳು ಅವಮಾನ ಮಾಡಿದ್ದರು. ಹಲ್ಲೆ ವಿಡಿಯೋ ವೈರಲ್ ಆಗಿ ಮಾಹಿತಿ ಹೊರಬಂದ ಹಿನ್ನೆಲೆ ಹಲ್ಲೆಗೊಳಗಾದ ಶಿಕ್ಷಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿನ ಶಾಲೆಗೆ ಬಂದ ಶಿಕ್ಷಕ ಕೆಲ ಹೊತ್ತಿನ ನಂತರ ಆಸ್ಪತ್ರೆಗೆ ತೆರಳಿದ್ದಾರೆ.ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ಈ ಘಟನೆ ನಡೆದಿದೆ.
ಶಿಕ್ಷಕನಿಗೆ ಮಕ್ಕಳು ತೊಂದರೆ ಕೊಡುತ್ತಿರುವ ವಿಡಿಯೋ ವೈರಲ್ ಆದ ನಂತರ ಶಾಲೆಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆ ಪರಿಶೀಲಿಸಿ ಪ್ರಕರಣ ದಾಖಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.







