ಬೆಂಗಳೂರು: ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಕ್ಸ್ ನಲ್ಲಿ ಇಟ್ಟಿದ್ದ ಕಂತೆ ಕಂತೆ ನೋಟು ವಶಕ್ಕೆ ಪಡೆದಿದ್ದಾರೆ.
ಏಕಕಾಲದಲ್ಲಿ ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ (IT Raid) ನಡೆದಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿದ್ದ ಮಂಚದಡಿ ಇಡಲಾಗಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.
23 ಬಾಕ್ಸ್ ಗಳಲ್ಲಿ 500 ಮುಖ ಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ಹಣವನ್ನು ಕಾರಿನಲ್ಲಿ ಸಾಗಾಟ ಮಾಡಲು ತಯಾರಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಆತ್ಮಾನಂದ ಕಾಲೋನಿಯ ಒಂದು ಫ್ಲಾಟ್ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲಿಸಿದಾಗ ಕೋಟ್ಯಂತರ ರೂ. ಪತ್ತೆಯಾಗಿದೆ. ಹಣ ಎಣಿಕೆ ಮಾಡಿ ನಂತರ ಮಾಜಿ ಕಾರ್ಪೋರೇಟರ್ ಮನೆಗೆ ದಾಳಿ ನಡೆಸಿದ್ದಾರೆ.
ಗಣೇಶ ಬ್ಲಾಕ್ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.